ಅಮಾನತು ಪ್ರಶ್ನಿಸಿದ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನೂ ಪ್ರತಿವಾದಿಯಾಗಿಸಲು ಶಿವಶಂಕರಪ್ಪ ಸಾಹುಕಾರ್‌ಗೆ ಹೈಕೋರ್ಟ್ ಸೂಚನೆ
- by Prashanth Basavapatna
- July 16, 2026
- 4 Views
ಬೆಂಗಳೂರು: ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸುವಂತೆ ಶಿವಶಂಕರಪ್ಪ ಸಾಹುಕಾರ್‌ಗೆ ಹೈಕೋರ್ಟ್ ಸೂಚಿಸಿದೆ.
ರಾಜ್ಯಪಾಲರ ಆದೇಶ ರದ್ದುಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಸಂವಿಧಾನದ ಪರಿಚ್ಛೇದ 317(1) ಅನ್ವಯ ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಆರೋಪವಿದ್ದರೆ, ಮೊದಲಿಗೆ ಸುಪ್ರೀಂಕೋರ್ಟ್ ವಿಚಾರಣೆಗೆ ರಾಷ್ಟ್ರಪತಿಗಳು ಶಿಫಾರಸು ಮಾಡಬೇಕಾಗುತ್ತದೆ. ವಿಚಾರಣಾ ವರದಿ ಬರುವವರೆಗೆ ಪರಿಚ್ಛೇದ 317(2) ಅನ್ವಯ ರಾಜ್ಯಪಾಲರು ಅಮಾನತು ಆದೇಶ ಹೊರಡಿಸಬೇಕಾಗುತ್ತದೆ ಎಂದರು.
ಜತೆಗೆ, ಸಚಿವ ಸಂಪುಟದ ಸಲಹೆ ಹಾಗೂ ಶಿಫಾರಸು ಇಲ್ಲದೇ ಅಮಾನತು ಮಾಡುವಂತಿಲ್ಲ. ಆದ್ದರಿಂದ, ಈ ನಿಯಮಕ್ಕೆ ವಿರುದ್ಧವಾಗಿ ರಾಜ್ಯಪಾಲರು ಅರ್ಜಿದಾರರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಅದು ಅಪಕ್ವ ಹಾಗೂ ಕಾನೂನುಬಾಹಿರವಾಗಿದೆ. ಆದ್ದರಿಂದ, ಅಮಾನತು ಆದೇಶಕ್ಕೆ ತಡೆ ನೀಡಿ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿಯ ಹಿತಾಸಕ್ತಿ ಮತ್ತು ಸಾರ್ವಜನಿಕರ ನಂಬಿಕೆ ರಕ್ಷಿಸಲು ಆಯೋಗದ ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ಗಂಭೀರ ಆರೋಪಗಳಿದ್ದ ಪಕ್ಷದಲ್ಲಿ ರಾಜ್ಯಪಾಲರೇ ಅಮಾನತು ಮಾಡಬಹುದು. ಇನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ಸದಸ್ಯರ ಸಲಹೆಯಿಲ್ಲದೇ ಅರ್ಜಿದಾರರನ್ನು ಅಮಾನತು ಆದೇಶ ಮಾಡುವಂತಿಲ್ಲ ಎಂದು ವಾದಿಸಲಾಗಿದೆ. ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ವಾದ ಮಂಡನೆ ವೇಳೆ ಹೇಳಲಾಗುತ್ತಿದೆ. ಈ ಅಂಶ ಆಧರಿಸುವುದಾದರೆ ಅರ್ಜಿಯಲ್ಲಿ ಸರ್ಕಾರವನ್ನೂ ಪ್ರತಿವಾದಿ ಮಾಡಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ನ್ಯಾಯಪೀಠ, ಸರ್ಕಾರವನ್ನು ಪಕ್ಷಗಾರನನ್ನಾಗಿ (ಪ್ರತಿವಾದಿ) ಮಾಡುವ ಬಗ್ಗೆ ನಿರ್ಧರಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಅರ್ಜಿದಾರರ ಪರ ವಕೀಲರು, ರಾಜ್ಯ ಸಚಿವ ಸಂಪುಟ ಸದಸ್ಯರ ಸಲಹೆ ಹಾಗೂ ಶಿಫಾರಸು ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ರಾಜ್ಯಪಾಲರೇ ಹೇಳಬೇಕಾಗುತ್ತದೆ. ಒಂದೊಮ್ಮೆ ರಾಜ್ಯ ಸಚಿವ ಸಂಪುಟ ಸದಸ್ಯರ ಸಲಹೆ ಹಾಗೂ ಶಿಫಾರಸು ಇದ್ದಿದ್ದರೆ, ಅದನ್ನು ರಾಜ್ಯಪಾಲರು ತಮ್ಮ ಆದೇಶದಲ್ಲಿ ಕಾಣಿಸುತ್ತಿದ್ದರು ಎಂದು ಹೇಳಿದರಲ್ಲದೆ, ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಲು ಕಾಲಾವಕಾಶ ಕೋರಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)