ಮ್ಯಾರೇಜ್ ಇನ್ವಿಟೇಷನ್ ಎಪಿಕೆ ಫೈಲ್ ಸೃಷ್ಟಿಸಿ 4 ಲಕ್ಷ ರೂ. ವಂಚನೆ ಆರೋಪ: ಲೀಗಲ್ ಪೇ ಉದ್ಯೋಗಿಗಳನ್ನು ಬಂಧಿಸದಂತೆ ಆದೇಶ
- by LegalSamachar
- May 27, 2026
- 4 Views
ಬೆಂಗಳೂರು: ಸ್ನೇಹಿತನ ವಾಟ್ಸ್ಆ್ಯಪ್ನಿಂದ ಬಂದ ‘ಮ್ಯಾರೇಜ್ ಇನ್ವಿಟೇಷನ್ʼ ಎಂಬ ಎಪಿಕೆ ಫೈಲ್ ತೆರೆದ ಕಾರಣಕ್ಕೆ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ. ಕಡಿತಗೊಂಡಿದೆ ಎಂದು ಪ್ಲಂಬರ್ ಒಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ‘ಲೀಗಲ್ ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಲೀಗಲ್ ಪೇ ಟೆಕ್ನಾಲಜಿಯ ನಿರ್ದೇಶಕ ಕುಂದನ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ (ಮೇ 26) ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣದ ಸಂಬಂಧ ಪೊಲೀಸರು ತನಿಖೆ ಮುಂದುವರಿಸಬಹುದಾಗಿದ್ದು, ಕಾನೂನಿನ ಪ್ರಕಾರ ಅಂತಿಮ ವರದಿ ಸಲ್ಲಿಸಬಹುದಾಗಿದೆ. ಆದರೆ, ತನಿಖೆ ಮುಗಿಯುವವರೆಗೆ ಅರ್ಜಿದಾರರು ಅಥವಾ ಲೀಗಲ್ ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ನ ಯಾವುದೇ ವ್ಯಕ್ತಿಯನ್ನು ಬಂಧಿಸಬಾರದು ಎಂದು ಮಧ್ಯಂತರ ನಿರ್ದೇಶನ ನೀಡಿ, ವಿಚಾರಣೆಯನ್ನು ಬೇಸಿಗೆ ರಜೆಯ ನಂತರಕ್ಕೆ ಮುಂದೂಡಿತು.
ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಮೇ 13ರಂದು ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಕಲಿ ಎಪಿಕೆ ಫೈಲ್ ಸೃಷ್ಟಿಸಿ, ಹಂಚಿಕೆ ಮಾಡಿರುವುದರಲ್ಲಿ ಅರ್ಜಿದಾರರ ಪಾತ್ರವಿಲ್ಲ. ಆ ಫೈಲ್ ತೆಗೆಯುವಂತೆಯೂ ದೂರುದಾರರಿಗೆ ಅರ್ಜಿದಾರರು ಸೂಚಿಸಿಲ್ಲ. ಪ್ರಕರಣದಲ್ಲಿನ ಸಾಕ್ಷಿಯು ಬಹುತೇಕ ದಾಖಲೆ ಮತ್ತು ವಿದ್ಯುನ್ಮಾನ ರೂಪದಲ್ಲಿರುವುದರಿಂದ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ, ಹಣವನ್ನು ದೂರುದಾರರಿಗೆ ಮರಳಿಸುವ ಎಲ್ಲ ಪ್ರಯತ್ನದಲ್ಲಿ ಸಹಕರಿಸುವುದಾಗಿ ತಿಳಿಸಿರುವುದರಿಂದ ಪೊಲೀಸರು ತನಿಖೆ ಮುಗಿಯುವವರೆಗೆ ಲೀಗಲ್ಪೇನ ಯಾವುದೇ ಉದ್ಯೋಗಿಯನ್ನು ಬಂಧಿಸಬಾರದು ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ವಿಚಾರಣೆ ವೇಳೆ ಕುಂದನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಎಸ್. ಶ್ಯಾಮ್ ಸುಂದರ್ ಅವರು, ಲೀಗಲ್ ಪೇ ಒಂದು ಪೇಮೆಂಟ್ ಗೇಟ್ವೇ ಆಗಿದ್ದು, ಭಾರತ್ಪೇ ಹಾಗೂ ಪೇಟಿಎಂ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ತನ್ನ ವೇದಿಕೆಯಿಂದ ಹಣ ವಂಚನೆಯಾವುದಕ್ಕೆ ಸಂಬಂಧಿಸಿದಂತೆ ಸಂಸ್ಥೆಗೆ ಯಾವುದೇ ನಿಯಂತ್ರಣ ಇರುವುದಿಲ್ಲ. ಸೈಬರ್ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಾದ ತಕ್ಷಣ ಲೀಗಲ್ಪೇ ಕ್ರಮಕೈಗೊಂಡಿದೆ. ತನಿಖಾಧಿಕಾರಿಗೆ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಒದಗಿಸಿದೆ. ಅರ್ಜಿದಾರರ ಹೆಸರು ಎಫ್ಐಆರ್ನಲ್ಲಿ ಇಲ್ಲದಿದ್ದರೂ ಮೇಲ್ನೋಟಕ್ಕೆ ವಂಚನೆಯಾಗಿದೆ ಎಂಬ ಏಕೈಕ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅರ್ಜಿದಾರರನ್ನು ಬಂಧಿಸಿದರೆ ಕಂಪನಿಯ ವರ್ಚಸ್ಸು ಹಾಗೂ ಲೀಗಲ್ಪೇನ ಷೇರು ಮೌಲ್ಯಕ್ಕೆ ಹೊಡೆತ ಬೀಳಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನು ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಲೀಗಲ್ ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಪೇಮೆಂಟ್ ಗೇಟ್ವೇ ಮೂಲಕ ನಡೆದ ವಹಿವಾಟುಗಳೆಲ್ಲವೂ ವಂಚನೆಯಿಂದ ಕೂಡಿವೆ. ಈ ಪೇಮೆಂಟ್ ಗೇಟ್ವೇ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ. ಆದ್ದರಿಂದ, ಈ ಕುರಿತು ಆಳವಾದ ತನಿಖೆ ನಡೆಸುವ ಅಗತ್ಯವಿದ್ದು, ಅರ್ಜಿದಾರರು ತನಿಖೆಗೆ ಸಹಕರಿಸಬೇಕಿದೆ ಎಂದು ತಿಳಿಸಿದರು.
ಪ್ರಕರಣವೇನು?
ಹುಳಿಮಾವು ನಿವಾಸಿಯಾದ ಪ್ಲಂಬರ್ ಸಿದ್ದರಾಜು ಎಂಬುವರಿಗೆ ಮಾರ್ಚ್ 27ರಂದು ಸ್ನೇಹಿತ ನಾಗರಾಜು ಅವರಿಂದ ವಾಟ್ಸ್ಆ್ಯಪ್ಗೆ ‘ಮ್ಯಾರೇಜ್ ಇನ್ವಿಟೇಷನ್’ ಎಂಬ ಎಪಿಕೆ ಫೈಲ್ ಬಂದಿತ್ತು. ಅದನ್ನು ಸಿದ್ದರಾಜು ಕ್ಲಿಕ್ ಮಾಡಿದ ತಕ್ಷಣ, ಮೊಬೈಲ್ ಹ್ಯಾಕ್ ಆಗಿ ಮಾರ್ಚ್ 31ರಂದು ಹಲವು ಅಪರಿಚಿತ ಸಂದೇಶಗಳು ನಿರಂತರವಾಗಿ ಬಂದಿದ್ದವು. ಸಂದೇಶ ಪರಿಶೀಲಿಸಿದಾಗ ಹಂತ ಹಂತವಾಗಿ ಒಟ್ಟು 4 ಲಕ್ಷ ರೂ. ಕಡಿತವಾಗಿತ್ತು. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಿದ್ದರಾಜು, ನನ್ನ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ‘ಲೀಗಲ್ ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಎಂಬ ಪೇಮೆಂಟ್ ಗೇಟ್ವೇ ಮೂಲಕ 4 ಲಕ್ಷ ರೂ. ಗಳನ್ನು ಅನಾಮಿಕ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಆದ್ದರಿಂದ, ಎಪಿಕೆ ಫೈಲ್ ಸೃಷ್ಟಿಸಿ, ಅಮಾಯಕರಿಗೆ ಮೋಸ ಮಾಡುತ್ತಿರುವವರನ್ನು ಪತ್ತೆ ಮಾಡಿ, ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದರ. ದೂರು ಆಧರಿಸಿ ಅನಾಮಿಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಸಿ), 66(ಡಿ), ಬಿಎನ್ಎಸ್ ಸೆಕ್ಷನ್ 318(4), 319(2) ಅಡಿ ಪ್ರಕರಣ ದಾಖಲಿಸಲಾಗಿದೆ.
Related Articles
Thank you for your comment. It is awaiting moderation.



Comments (0)