ತೋಟಗಾರಿಕೆ ಇಲಾಖೆ ಜಮೀನಿನಲ್ಲಿ ಎಪಿಎಂಸಿ ಹೂ ಮಾರುಕಟ್ಟೆ ನಿರ್ಮಾಣ ಪ್ರಸ್ತಾವಕ್ಕೆ ಆಕ್ಷೇಪ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by LegalSamachar
- May 27, 2026
- 4 Views
ಬೆಂಗಳೂರು: ಚಿಕ್ಕಬಳ್ಳಾಪುರ ಹೊರವಲಯದ ನಂದಿ ಕ್ರಾಸ್ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ 20 ಎಕರೆಗೂ ಅಧಿಕ ಜಮೀನನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೂ ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರು ಮಾಡುವ ಪ್ರಕ್ರಿಯೆ ಪ್ರಶ್ನಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿಯ ಕೃಷಿಕ ಬಿ. ತಿಪ್ಪಾರೆಡ್ಡಿ ಸೇರಿ 6 ಸ್ಥಳೀಯ ರೈತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ (ಮೇ 26) ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ವಾದ ಮಂಡಿಸಿ, ನಂದಿ ಹೋಬಳಿ, ಯಲುವನಹಳ್ಳಿಯ ವಿವಿಧ ಸರ್ವೇ ನಂಬರ್‌ಗಳಲ್ಲಿರುವ 20 ಎಕರೆಗೂ ಅಧಿಕ ಜಮೀನನ್ನು ಎಪಿಎಂಸಿಗೆ ಹಸ್ತಾಂತರಿಸುವ ಭರದ ಚಟುವಟಿಕೆಗಳು ನಡೆದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸದ್ಯ ತೋಟಗಾರಿಕೆ ಇಲಾಖೆ ವಶದಲ್ಲಿರುವ ಈ ಜಮೀನಿನಲ್ಲಿ ಹಲವು ಜಾತಿಯ ಬೃಹತ್ ಮರಗಳಿವೆ. ಈ ಅಮೂಲ್ಯ ಮರಗಳನ್ನು ಕತ್ತರಿಸಲು ಎಪಿಎಂಸಿ ಅಧಿಕಾರಿಗಳು ಅರಣ್ಯ ಇಲಾಖೆಯ ಅನುಮತಿ ಕೋರಿದ್ದಾರೆ. ಆದ್ದರಿಂದ, ಈ ಜಮೀನು ತೋಟಗಾರಿಕೆ ಇಲಾಖೆಯಲ್ಲೇ ಉಳಿಯುವಂತೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೇರಿ ಅರ್ಜಿಯಲ್ಲಿನ 7 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಉದ್ದೇಶಿತ ತೋಟಗಾರಿಕೆ ಇಲಾಖೆಯ ಜಮೀನಿನಲ್ಲಿ 40ರಿಂದ 45 ವರ್ಷದ ಸಾವಿರದಷ್ಟು ಮರ-ಗಿಡಗಳಿವೆ. ಇವುಗಳಲ್ಲಿ ಅತ್ಯುತ್ತಮ ತಳಿಯ ಸಪೋಟಾ, ಮಾವು, ಹಲಸು, ನೇರಳೆ ಮರಗಳಿವೆ. ಮಣ್ಣು ಪರೀಕ್ಷಾ ಕೇಂದ್ರ, ರೈತರಿಗೆ ತರಬೇತಿ ನೀಡುವ ಕೇಂದ್ರ ಮತ್ತು ಪಾಲಿ ಹೌಸ್‌ಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಅಮೂಲ್ಯ ಜಮೀನನ್ನು ಹಸ್ತಾಂತರ ಮಾಡುವ ಹಿಂದೆ ಸ್ಥಳೀಯ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ, ವಿಶೇಷವಾಗಿ ವರ್ತಕರ ಸ್ವಹಿತಾಸಕ್ತಿ ಅಡಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಸ್ಥಳೀಯ ರೈತರ ವಿರೋಧದ ನಡುವೆಯೂ ವಿವಾದಿತ ಪ್ರದೇಶದಲ್ಲಿ ಎಪಿಎಂಸಿ ಹೂ ಮಾರುಕಟ್ಟೆ ಸ್ಥಾಪಿಸುವ ವಾಣಿಜ್ಯೋದ್ಯಮ ಪ್ರಯತ್ನಗಳು ಭರದಿಂದ ಸಾಗಿವೆ. ಉದ್ದೇಶಿತ ಮಾರುಕಟ್ಟೆ ಸ್ಥಾಪನೆಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಬಂಜರು ಭೂಮಿ ಇದೆ. ಹೀಗಿರುವಾಗ, ತೋಟಗಾರಿಕೆ ಇಲಾಖೆಯ ಅಭಿವೃದ್ಧಿ ಹೊಂದಿದ ಜಮೀನನ್ನು ಹೊರತುಪಡಿಸಿ ಬೇರೆ ಯಾವುದಾದರೂ ಜಮೀನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.



Comments (0)