ಯಾವ ಜೈಲಿನಲ್ಲಿರಬೇಕೆಂದು ಆರೋಪಿ ನಿರ್ಧರಿಸಲಾಗದು; ಬಳ್ಳಾರಿ ಜೈಲಿನಿಂದ ಸ್ಥಳಾಂತರಕ್ಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Prashanth Basavapatna
- May 19, 2026
- 11 Views
ಬೆಂಗಳೂರು: ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ಬಂಧಿತ ವ್ಯಕ್ತಿಯು ತಾನು ಇಂಥದ್ದೇ ಜೈಲಿನಲ್ಲಿರಬೇಕೆಂದು ಕೋರಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ತನ್ನನ್ನು ಕೆ.ಆರ್. ನಗರ ಅಥವಾ ನಂಜನಗೂಡು ಜೈಲಿಗೆ ಸ್ಥಳಾಂತರಿಸಲು ನಿರ್ದೇಶಿಸಬೇಕು ಎಂಬ ಮೈಸೂರಿನ ಆರೋಪಿಯೊಬ್ಬನ ಮನವಿಯನ್ನು ತಿರಸ್ಕರಿಸಿದೆ.
ಬಳ್ಳಾರಿ ಜೈಲಿನಿಂದ ಬೇರೆ ಕಾರಾಗೃಹಕ್ಕೆ ವರ್ಗಾವಣೆ ಮಾಡುವಂತೆ ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಇರ್ಫಾನ್ ಪಾಷಾ ಅಲಿಯಾಸ್ ಬಟಾನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದೇಶದಲ್ಲೇನಿದೆ?
ಅರ್ಜಿದಾರ ಆರೋಪಿ ದೀರ್ಘಕಾಲದವರೆಗೆ ಮಾದಕವಸ್ತು ಮಾರಾಟ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ. ಬಂಧಿತನನ್ನು ಅವನ ಕಾರ್ಯಾಚರಣೆಯ ಪ್ರದೇಶದಿಂದ ದೂರದ ಜೈಲಿನಲ್ಲಿರಿಸುವುದರ ಉದ್ದೇಶವು ಆತನ ಸಂಪರ್ಕಗಳ ಸರಣಿಯನ್ನು ಅಡ್ಡಿಪಡಿಸುವುದು ಮತ್ತು ಸ್ಥಳೀಯ ಸಂಪರ್ಕಗಳನ್ನು ಕಡಿಗೊಳಿಸುವುದಾಗಿದೆ. ಆ ದೃಷ್ಟಿಯಿಂದ ಆತನನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಅದನ್ನು ಮತ್ತೆ ಬದಲಾಯಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಆರೋಪಿಯು ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂಬ ಏಕೈಕ ಕಾರಣವನ್ನು ಉಲ್ಲೇಖಿಸಲಾಗಿದೆ. ಆದರೂ, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ ಎಂದು ತೋರಿಸಲು ಬಲವಾದ ಸ್ವರೂಪದ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ವೈದ್ಯಕೀಯ ಆರೈಕೆಯ ನಿರಾಕರಣೆ ಸೂಚಿಸುವ ಯಾವುದೇ ದೃಢೀಕೃತ ಸಾಕ್ಷ್ಯದ ಅನುಪಸ್ಥಿತಿಯಲ್ಲಿ ಕೇವಲ ಅನಾರೋಗ್ಯದ ಹೇಳಿಕೆಯು ಹಕ್ಕಿನ ವಿಷಯವಾಗಿ ಮತ್ತೊಂದು ಜೈಲಿಗೆ ವರ್ಗಾಯಿಸಲು ಕೋರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?
ಮಾದಕ ದ್ರವ್ಯಗಳು ಹಾಗೂ ಉದ್ದೀಪನ ವಸ್ತುಗಳ ಅಕ್ರಮ ಸಾಗಣೆ ತಡೆ ಕಾಯ್ದೆಯಡಿಲ್ಲಿ ಅರ್ಜಿದಾರನನ್ನು ಮುನ್ನೆಚ್ಚರಿಕೆ ಬಂಧದಲ್ಲಿಡಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಏಪ್ರಿಲ್ 6 ರಂದು ಆದೇಶಿಸಿದ್ದರು. ಆ ನಿರ್ದೇಶನದ ಆಧಾರದಲ್ಲಿ ಅರ್ಜಿದಾರನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ತಾನು ಮೈಸೂರು ಜಿಲ್ಲೆಯವನಾಗಿರುವುದರಿಂದ, ಕೃಷ್ಣರಾಜನಗರ (ಕೆ.ಆರ್. ನಗರ) ಅಥವಾ ನಂಜನಗೂಡು ಜೈಲಿಗೆ ವರ್ಗಾಯಿಸಬೇಕೆಂದು ಕೋರಿ ಪಾಷಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಪಾಷಾ ಪರ ವಕೀಲರು, ಆರೋಪಿ ನಿಯತಕಾಲಿಕವಾಗಿ ವೈದ್ಯಕೀಯ ಆರೈಕೆಯ ಅಗತ್ಯವಿರುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರನ್ನು ಅವರ ಊರಿಗೆ ಹತ್ತಿರವಿರುವ ಜೈಲಿನಲ್ಲಿರಿಸಿದರೆ ಸೌಲಭ್ಯಗಳು ಹೆಚ್ಚು ಸುಲಭವಾಗಿ ಲಭ್ಯವಿರುತ್ತವೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಈ ಮನವಿಗೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರನು 2014ರಿಂದ ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿರುವ ಇತಿಹಾಸ ಹೊಂದಿದ್ದಾನೆ. ಅವನ ಸ್ಥಳೀಯ ಜಾಲವನ್ನು ಬೇರ್ಪಡಿಸಲು ಹಾಗೂ ಅಕ್ರಮ ಚಟುವಟಿಕೆ ಮರುಕಳಿಸುವುದನ್ನು ತಡೆಯಲು ಉದ್ದೇಶಿಸಿ ಪ್ರಜ್ಞಾಪೂರ್ವಕವಾಗಿ ಆತನನ್ನು ಬಳ್ಳಾರಿ ಜೈಲಿನಲ್ಲಿಡುವ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
Related Articles
Thank you for your comment. It is awaiting moderation.



Comments (0)