ಜೀವ ಬೆದರಿಕೆ ಆರೋಪ; ತಿಮರೋಡಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರು ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಹಾಗೂ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ತಿಮರೋಡಿ ವಿರುದ್ಧ ಜೂನ್ 8ರವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಗ್ರಾಮೀಣ ಠಾಣೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದರ ಸಂಬಂಧಿತ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ವಿಚಾರಣೆ ವೇಳೆ ತಿಮರೋಡಿ ಪರ ವಕೀಲ ಎಂ.ಆರ್. ಬಾಲಕೃಷ್ಣ ವಾದ ಮಂಡಿಸಿ, ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಅರ್ಜಿದಾರರಿಗೆ ಕಿರುಕುಳ ನೀಡಲು ಈ ದೂರು ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದರು.

ದೂರುದಾರ ಸುಂದರ ರೈ ಮಂದಾರ ಪರ ವಕೀಲರು, ಸತೀಶ್ ಕುಮಾರ್ ರೈ ಅವರು ದೂರುದಾರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಸಂಬಂಧ ಅವರ ಫೋನ್ ಸಂಭಾಷಣೆಯ ಪ್ರತಿಲಿಪಿ (ಟ್ರಾನ್ಸ್‌ಕ್ರಿಪ್ಷನ್) ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ಅದಕ್ಕೆ ಅನುಮತಿಸಿದ ಹೈಕೋರ್ಟ್, ಅರ್ಜಿಯ ಮುಂದಿನ ವಿಚಾರಣೆವರೆಗೆ ತಿಮರೋಡಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಠಾಣೆ ಪೊಲೀಸರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.

ಪ್ರಕರಣವೇನು?
ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಗೆ ಮೇ 7ರಂದು ತೆರಳಿ ದೂರು ನೀಡಿದ್ದ ಸುಂದರ ರೈ ಮಂದಾರ, ನಾನು ಏಪ್ರಿಲ್ 15ರಂದು ಮಹೇಶ್ ಶೆಟ್ಟಿ ತಿಮರೂಡಿ ಅವರ ವಿರುದ್ಧ ದೂರು ದಾಖಲಿಸಿದ್ದೆ. ಸತೀಶ್ ಕುಮಾರ್ ರೈ ಪಡುಮಲೆ ಎಂಬುವವರು ನನಗೆ ಕರೆ ಮಾಡಿ ತಿಮರೋಡಿ ಅವರ ವಿರುದ್ಧ ದೂರು ದಾಖಲಿಸಿದ ವಿಚಾರ ಸಂಬಂಧ ಮಾತನಾಡಿದರು. ತಿಮರೋಡಿ ಅವರನ್ನು ಸಮರ್ಥಿಸಿಕೊಂಡು, ನನಗೆ ಅವಮಾನವಾಗುವಂತೆ ಮಾತನಾಡಿ, ನನ್ನನ್ನು ಬೆದರಿಸಿದರು. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆದು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಕುಡ್ಲ ರ‌್ಯಾಂಪೇಜ್ ಫಿಯೋನಿಕ್ಸ್/ಭುಜ್ ಹಾಗೂ ಪ್ರಸನ್ನ ರವಿ ಅವರು ಇದೇ ರೀತಿ ಪ್ರಯತ್ನ ಮಾಡಿದ್ದಾರೆ. ತಿಮರೋಡಿ ಅನುಯಾಯಿಗಳು ನನ್ನ ಮತ್ತು ನನ್ನ ಪತ್ನಿ ಬಗ್ಗೆ ಕೆಟ್ಟ ಹಾಗೂ ಅಶ್ಲೀಲವಾಗಿ ಯಕ್ಷಗಾನ ಹಾಡು ಬರೆದು ಪ್ರಸಾರ ಮಾಡಿದ್ದಾರ. ಈ ಎಲ್ಲ ವ್ಯಕ್ತಿಗಳು ತಿಮರೋಡಿ ವಿರುದ್ಧ ದೂರು ದಾಖಲಿಸಿದ ಏಕೈಕ ಕಾರಣಕ್ಕೆ ಕೆಟ್ಟದಾಗಿ ಮಾತನಾಡಿ ಅವಮಾನಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ. ತಿಮರೋಡಿ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುವಂತೆ ಹಾಗೂ ಅವರ ಪರ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ದೂರು ಆಧರಿಸಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಬಿಎನ್ಎಸ್ ಸೆಕ್ಷನ್ 351(2) ಅಡಿಯಲ್ಲಿ ಜೀವ ಬೆದರಿಕೆ ಹಾಕಿದ ಹಾಗೂ ಸೆಕ್ಷನ್ 232 ಅಡಿಯಲ್ಲಿ ಬೆದರಿಕೆ ಹಾಕಿ ವ್ಯಕ್ತಿಯ ಘನತೆಗೆ ಹಾನಿ ಉಂಟು ಮಾಡಿದ ಹಾಗೂ ಸುಳ್ಳು ಸಾಕ್ಷ್ಯ ನೀಡಲು ಒತ್ತಾಯಿಸಿದ ಆರೋಪದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದೀಗ ಪ್ರಕರಣ ರದ್ದು ಕೋರಿ ಮೊದಲನೇ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment