ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಪುತ್ರಿ; ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ತಂದೆಗೆ ₹25 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಗಳನ್ನು ಅನಾಮಿಕ ವ್ಯಕ್ತಿಗಳು ಅಕ್ರಮವಾಗಿ ಒತ್ತೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ಮಗಳನ್ನು ಪತ್ತೆ ಹಚ್ಚಿ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಹಾಗೂ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು, ಯುವತಿಯು ತನ್ನ ರಕ್ಷಣೆಗೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಏಪ್ರಿಲ್‌ 15ರಂದು ಸಮನ್ವಯ ನ್ಯಾಯಪೀಠವು ಯುವತಿಗೆ ರಕ್ಷಣೆ ನೀಡುವಂತೆ ಆದೇಶಿಸಿದೆ. ಏಪ್ರಿಲ್‌ 8ರಂದು ಪ್ರಕರಣ ದಾಖಲಿಸಲಾಗಿದೆ ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪುತ್ರಿ ಏಪ್ರಿಲ್‌ 6ರಂದು ಮನೆ ತೊರೆದಿದ್ದಾರೆ. ಆನಂತರ, ಎರಡು ದಿನಗಳ ಬಳಿಕ ಪೊಲೀಸರ ರಕ್ಷಣೆ ಕೋರಿದ್ದಾರೆ. ಅದಾಗ್ಯೂ, ಒಂದು ತಿಂಗಳ ನಂತರ ತಂದೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿತಲ್ಲದೆ, ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿತು. ಅರ್ಜಿದಾರರು ಒಂದು ವಾರದಲ್ಲಿ ದಂಡದ ಮೊತ್ತವನ್ನು ರಿಜಿಸ್ಟ್ರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಸೂಕ್ತ ಕಾನೂನು ಪ್ರಕ್ರಿಯೆ ಮೂಲಕ ದಂಡ ವಸೂಲಿ ಮಾಡಲು ರಿಜಿಸ್ಟ್ರಿಗೆ ನ್ಯಾಯಾಲಯ ನಿರ್ದೇಶಿಸಿತು.

ಬಲವಂತ ಮಾಡಲಾಗದು:
ವಿಚಾರಣೆ ವೇಳೆ ತಂದೆಯ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ಪುತ್ರಿ ನಾಪತ್ತೆಯಾಗಿದ್ದು, ಮೇ 8ರವರೆಗೆ ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿಯೇ ಇರಲಿಲ್ಲ. ಕುಟುಂಬದವರ ಭಯದಿಂದ ಆಕೆ ಪೊಲೀಸರ ರಕ್ಷಣೆ ಕೋರಿದ್ದಾಳೆ. ತಂದೆ ಮತ್ತು ಮಗಳ ನಡುವೆ ಕನಿಷ್ಠ ಒಂದು ಸಮಾಲೋಚನೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಏಪ್ರಿಲ್‌ 15ರಂದು ಸಮನ್ವಯ ನ್ಯಾಯಪೀಠ ಯುವತಿಗೆ ರಕ್ಷಣೆ ಒದಗಿಸಿದೆ ಎಂದರು.

ಈ ಹಂತದಲ್ಲಿ ನ್ಯಾಯಪೀಠ, ಮನೆ ಬಿಟ್ಟು ಹೋಗಿರುವ ಪ್ರಕರಣ ಇದಾಗಿದೆ. ಇದರಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ವಯಸ್ಕ ಮಹಿಳೆ ಸ್ವಇಚ್ಛೆಯಿಂದ ನಿರ್ಧಾರ ಮಾಡಿದ್ದಾರೆ. ಅರ್ಜಿದಾರರ 25 ವರ್ಷದ ಪುತ್ರಿ ನಿರ್ಧಾರ ಮಾಡಿ ಮನೆಯಿಂದ ಹೋಗಿದ್ದು, ಆಕೆಯನ್ನು ಕುಟುಂಬದ ಜೊತೆ ಸೇರುವಂತೆ ಬಲವಂತ ಮಾಡಲಾಗದು. ಪ್ರತಿ ದಿನ ಇಂಥ ಪ್ರಕರಣಗಳು ನಡೆಯುತ್ತವೆ. ಅವುಗಳನ್ನೆಲ್ಲ ಇಲ್ಲಿ ಕುಳಿತು ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಲಾಗುತ್ತದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

ನ್ಯಾಯಾಲಯದ ಅಮೂಲ್ಯ ಸಮಯವನ್ನು ಪೋಲು ಮಾಡಲಾಗುತ್ತಿದೆ. ಪ್ರಕರಣ ನೈಜವಾಗಿದ್ದರೆ ಅದನ್ನು ಪರಿಗಣಿಸಬಹುದು. ಆದರೆ, ಹಾಲಿ ಪ್ರಕರಣ ನೈಜವಾದುದ್ದಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿತು.

Related Articles

Comments (0)

Leave a Comment