ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ಸುನೀಲ್, ಕಿರಣ್‌ಗೆ 10 ದಿನ ಬ್ರೆಜಿಲ್ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿ
- by LegalSamachar
- May 12, 2026
- 7 Views
ಬೆಂಗಳೂರು: ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಗಳಾಗಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸುನೀಲ್ ಮ್ಯಾಥ್ಯೂ ಹಾಗೂ ಎಸ್. ಕಿರಣ್ ಕುಮಾರ್‌ಗೆ ಕೆಲಸದ ನಿಮಿತ್ತ ವಿದೇಶ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿಸಿದೆ.
ಸುನೀಲ್ ಹಾಗೂ ಕಿರಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಮುಚ್ಚಳಿಕೆಯ ಪ್ರಮಾಣಪತ್ರ ಹಾಗೂ ಪ್ರವಾಸದ ಪಟ್ಟಿಯನ್ನು ಪರಿಗಣಿಸಿ ಜೂನ್ 1ರಿಂದ 10ರವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳಲು ಅನುಮತಿಸಿ, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಬಿ.ಕೆ. ಸಂಪತ್ ಕುಮಾರ್ ವಾದ ಮಂಡಿಸಿ, ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಇದೆ. ಹನ್ನೊಂದು ತಿಂಗಳಿಂದ ಅರ್ಜಿದಾರರು ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಯಾಲಯ ವಿಧಿಸಿರುವ ಯಾವ ಷರತ್ತುಗಳನ್ನೂ ಅರ್ಜಿದಾರರು ಉಲ್ಲಂಘಿಸಿಲ್ಲ ಎಂದರು.
ರಾಜ್ಯ ಸರ್ಕಾರದ ಪರ ವಿಶೇಷ ವಕೀಲ ಬಿ.ಟಿ. ವೆಂಕಟೇಶ್ ಅವರು, ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಈ ಹಂತದಲ್ಲಿ ಅರ್ಜಿದಾರರಿಗೆ ನೀಡಿರುವ ಜಾಮೀನು ಷರತ್ತುಗಳನ್ನು ಸಡಿಲಿಕೆ ಮಾಡುವುದು ಸರಿಯಲ್ಲ ಎಂದರು.
ಆಗ ನ್ಯಾಯಪೀಠ, ವಿದೇಶದಿಂದ ಹಿಂದಿರುಗಿ ಬರುವ ಖಾತ್ರಿ ನೀಡಬೇಕು. ಇದಕ್ಕೆ ಮನೆಯವರಿಂದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಹೇಳಿತು.
ಅದಕ್ಕೆ ಸಂಪತ್ ಕುಮಾರ್ ಅವರು, ಸುನೀಲ್ ಮ್ಯಾಥ್ಯೂ ಅವರು ಐಪಿಎಲ್‌ನ ಎಂಟು ತಂಡಗಳನ್ನು ನಿರ್ವಹಿಸುತ್ತಾರೆ. ಐಪಿಎಲ್‌ನಲ್ಲಿ ಪ್ರತಿದಿನ 3 ಕಾರ್ಯಕ್ರಮ ಆಯೋಜಿಸಬೇಕು. ಎಲ್ಲಿಗೂ ಸುನೀಲ್ ಹೋಗುವುದಿಲ್ಲ. ಅವರ ಪತ್ನಿ ಇಲ್ಲೇ ಉದ್ಯೋಗದಲ್ಲಿದ್ದಾರೆ ಎಂದರು.
ಇದಕ್ಕೆ ನ್ಯಾಯಪೀಠ, ಸುನೀಲ್ ಮತ್ತು ಕಿರಣ್ ವಿದೇಶದಿಂದ ವಾಪಸ್ಸಾಗುವವರೆಗೆ ಮನೆಯವರು ದೇಶ ತೊರೆಯುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಬಳಿಕ ಇದರ ಅನುಪಾಲನೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಿದ್ದನ್ನು ಪರಿಗಣಿಸಿ, ಅರ್ಜಿದಾರರ ವಿದೇಶ ಪ್ರವಾಸಕ್ಕೆ ಅನುಮತಿಸಿತು.
Related Articles
Thank you for your comment. It is awaiting moderation.



Comments (0)