“ಮುಸ್ಲಿಂ ಹುಡುಗಿಯರು ಗಂಡಸರಿಗಿಂತ ಡೇಂಜರ್” ಹೇಳಿಕೆ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
- by Jagan Ramesh
- May 13, 2026
- 11 Views
ಬೆಂಗಳೂರು/ಧಾರವಾಡ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಕುರಿತು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಧಾರವಾಡ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಅಲಿಯಾಸ್ ಮಿಥುನ್ ಚಕ್ರವರ್ತಿ ದೇವಿದಾಸ್ ಶೇಟ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಮೇ 7ರಂದು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಕುಮಾರ್ ಹಂಚಾಟೆ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ವಿಚಾರಣೆ ವೇಳೆ ಸೂಲಿಬೆಲೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಹಾಗೂ ಸುಳ್ಳು ದೂರು ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳ ಉಲ್ಲಂಘನೆಯಾಗಿದೆ. ದೂರು ನೀಡಿರುವ ಪೊಲೀಸ್ ಕಾನ್‌ಸ್ಟೆಬಲ್ ಅವರು ಸಂತ್ರಸ್ತ ವ್ಯಕ್ತಿಯಲ್ಲದ ಕಾರಣ, ಈ ದೂರು ದಾಖಲಿಸಲು ಅವರಿಗೆ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ. ಅರ್ಜಿದಾರರು ಕೇವಲ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದು ಭಾರತದ ಸಂವಿಧಾನದ ಪರಿಚ್ಛೇದ 19ರ ಅಡಿ ನೀಡಲಾದ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಲಿ ಪ್ರಕರಣದಲ್ಲಿ ಬಿಎನ್ಎಸ್ ಸೆಕ್ಷನ್ 196ರ ಅಂಶಗಳು ಅನ್ವಯಿಸುವುದಿಲ್ಲ. ಆದ್ದರಿಂದ, ಪ್ರಕರಣಕ್ಕೆ ತಡೆ ನೀಡಬೇಕೆಂದು ಕೋರಿದರು.
ಇದನ್ನು ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸುವ ಅಗತ್ಯವಿದೆ. ಅದಾಗ್ಯೂ, ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಲು ಸೂಕ್ತ ಆಧಾರಗಳು ಕಂಡುಬರುತ್ತಿವೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಧಾರವಾಡ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತದರ ಸಂಬಂಧ ಧಾರವಾಡದ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಬಾಕಿ ಇರುವ ಎಲ್ಲ ಮುಂದಿನ ಪ್ರಕ್ರಿಯೆಗಳಿಗೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತು.
ಇದೇ ವೇಳೆ, ಅರ್ಜಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿತು.
ಎಫ್‌ಐಆರ್‌ನ ಸಾರಾಂಶ:
ಧಾರವಾಡ ಟೌನ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ತುಕಾರಾಮ ಜಿ. ಬಂಡಿವಡ್ಡರ ಅವರು 2026ರ ಏಪ್ರಿಲ್ 11ರಂದು ದೂರು ನೀಡಿ, ಏಪ್ರಿಲ್ 7ರಂದು ಕರ್ತವ್ಯದಲ್ಲಿರುವಾಗ ಸಂಜೆ 6ರಿಂದ 6.50ರ ಅವಧಿಯಲ್ಲಿ ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ ಮಾಡುತ್ತಾ, “ಮುಸಲ್ಮಾನ್ ಹುಡುಗಿಯರಿದ್ದಾರಲ್ಲಾ ಗಂಡಸರಿಗಿಂತ ಡೇಂಜರ್, ನಮ್ಮ ಹೆಣ್ಣು ಮಕ್ಕಳಿಗೆ ಮನೆಗೆ ಹೋಗಿ ಹೇಳಿಕೊಡಿ. ಅಕಸ್ಮಾತ್ ಮುಸ್ಲಿಂ ಹುಡುಗನ್ನ ಫ್ರೆಂಡ್‌ಶಿಪ್ ಮಾಡಿದರೆ ಓಕೆ, ಮುಸ್ಲಿಂ ಹೆಣ್ಣು ಮಕ್ಕಳನ್ನು ಫ್ರೆಂಡ್‌ಶಿಪ್ ಮಾಡಲೇ ಬೇಡಿ ಬಹಳ ಡೇಂಜರ್, ಮುಸ್ಲಿಂ ಹೆಣ್ಣು ಮಗಳು ಒಂದನೇ ಸಲ ಕರೆದಾಗ ಬೇಡ ಅನ್ನಬಹುದು, 2ನೇ ಸಲ ಕರೆದಾಗ ಬರೋಲ್ಲ ಅನ್ನಬಹುದು, 20 ಸಲ ಪದೇಪದೆ ಕರೆದಾಗ 21ನೇ ಸಲ ಕರೆದಾಗ ಹಾಳಾಗಿ ಹೋಗಲಿ ಅಂತ ನಮ್ಮ ಹೆಣ್ಣು ಮಕ್ಕಳು ಅವರ ಮನೆಗೆ ಹೋದ ಪ್ರತಿಫಲಕ್ಕೆ ಅವಳು ಏನು ಮಾಡುತ್ತಾಳೆ ಗೊತ್ತಾ? ಕುಡಿಯುವ ನೀರಿಗೆ ಏನೋ ಮತ್ತು ಬರುವಂತ ಅಂಶವನ್ನು ಹಾಕಿ ಕೊಟ್ಟು ರಾಕ್ಷಸರಂತಿರುವ ತನ್ನ ಅಣ್ಣ ತಮ್ಮಂದಿರ ಕಡೆಗೆ ಕೊಟ್ಟು ವಿಡಿಯೊ ಕಳಿಸಿದ್ರೆ ಹೆಣ್ಣು ಮಕ್ಕಳ ಕಥೆ ಮುಗೀತು, ಅವರಿಗೆ ಲೈಫೆ ಇರೋದಿಲ್ಲ” ಎಂದು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ದ್ವೇಷ ಭಾವನೆ ಬರುವಂತೆ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸೂಲಿಬೆಲೆ ಅವರ ಈ ಭಾಷಣದಿಂದ ಮುಸ್ಲಿಂ ಸಮುದಾಯದವರು ಪ್ರಚೋದನೆಗೆ ಒಳಗಾಗಿ ದೊಂಬಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಪ್ರಚೋದನಕಾರಿ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು. ಈ ದೂರನ್ನು ಆಧರಿಸಿ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 196(1)ರ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಸೂಲಿಬೆಲೆ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.



Comments (0)