ಲಿಂಗಪರಿವರ್ತಿತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ; ತೃತೀಯ ಲಿಂಗಿಗಳಿಬ್ಬರ ಎಚ್‌ಆರ್‌ಟಿ ಮುಂದುವರಿಕೆಗೆ ಹೈಕೋರ್ಟ್ ಅಸ್ತು

ಬೆಂಗಳೂರು: ಕೇಂದ್ರ ಸರ್ಕಾರದ ‘ಲಿಂಗಪರಿವರ್ತಿತ ವ್ಯಕ್ತಿಗಳ (ಹಕ್ಕುಗಳ ರಕ್ಷ ಣೆ) ತಿದ್ದುಪಡಿ ಕಾಯ್ದೆ-2026’ರ ಜಾರಿಯ ನಡುವೆ ಇಬ್ಬರು ತೃತೀಯ ಲಿಂಗಿಗಳಿಗೆ ಹಾರ್ಮೋನ್‌ ಬದಲಾವಣೆ ಥೆರಪಿ (ಎಚ್‌ಆರ್‌ಟಿ) ಮುಂದುವರಿಸುವಂತೆ ವೈದ್ಯಕೀಯ ವೃತ್ತಿಪರರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ತೃತೀಯ ಲಿಂಗಿಗಳಾದ ಎಂ. ಮಾಯಾ ಹಾಗೂ ಅಕಿರಾ ಮುಜಾವರ್ ಎಂಬುವರು ಸಲ್ಲಿಸಿರುವ ಎರಡು ಪ್ರತ್ಯೇಕ ರಿಟ್ ಅರ್ಜಿಗಳನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ಪ್ರಸ್ತುತಪಡಿಸಿರುವ ವೈದ್ಯಕೀಯ ದಾಖಲೆಗಳನ್ನು ನೋಡಿದರೆ ಮೇಲ್ನೋಟಕ್ಕೆ ಅವರು 2023ರ ನವೆಂಬರ್ 11ರಿಂದ ಹಾರ್ಮೋನ್‌ ಬದಲಾವಣೆ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ನಿಲ್ಲಿಸುವುದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಪರಿಣಾಮ ಉಂಟು ಮಾಡುತ್ತದೆ ಎಂದು ಅಭಿಪ್ರಾಯಪಟ್ಟು, ಎಚ್‌ಆರ್‌ಟಿ ಮುಂದುವರಿಸಲು ಆದೇಶಿಸಿರುವ ನ್ಯಾಯಪೀಠ, ಚಿಕಿತ್ಸೆ ಮುಂದುವರಿಕೆಯು ಹಾಲಿ ಅರ್ಜಿಯ ನಿರ್ಧಾರ ಹಾಗೂ ಸುಪ್ರೀಂಕೋರ್ಟ್‌ ಹೊರಡಿಸುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ಅವರು, ಯಾವುದೇ ಮಾತ್ರೆ ತೆಗೆದುಕೊಳ್ಳದಂತೆ ಅರ್ಜಿದಾರರನ್ನು ಯಾರೂ ನಿರ್ಬಂಧಿಸಿಲ್ಲ ಹಾಗೂ ಅವರ ವಿರುದ್ಧ ಬಲವಂತದ ಕ್ರಮ ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ. ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿ, ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ವೈದ್ಯರು ಹಾರ್ಮೋನ್‌ ಥೆರಪಿ ಚಿಕಿತ್ಸೆ ಮುಂದುವರಿಸಲು ಹಿಂಜರಿಯುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಬಂಧಿಸುವುದು ಸಂವಿಧಾನದ ಪರಿಚ್ಛೇದ 14 ಹಾಗೂ 21ರ ಉಲ್ಲಂಘನೆಯಾಗಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Related Articles

Comments (0)

Leave a Comment