ಹೆತ್ತವರ ಪತ್ತೆಗೆ ಮುಂದಾದ ಭಾರತೀಯ ಮೂಲದ ಜರ್ಮನ್ ಮಹಿಳೆ: ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಜರ್ಮನಿಯ ದಂಪತಿಯಿಂದ ದತ್ತು ಸ್ವೀಕರಿಸಲ್ಪಟ್ಟಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ ಜೈವಿಕ ಪೋಷಕರನ್ನು ಪತ್ತೆ ಮಾಡಲು ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಬೆಂಗಳೂರಿನ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ‌.

ಜರ್ಮನಿ ನಿವಾಸಿಯಾಗಿರುವ ಅನಿತಾ ವೈಸೆಂಡ್ಟ್ (48) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು, ಅನಿತಾ ಅವರ ಹೆತ್ತವರಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಐದು ವರ್ಷದ ದಾಖಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ದಾಖಲೆಗಳನ್ನು ನಾಶಪಡಿಸಲಾಗಿದೆ. ಆದ್ದರಿಂದ, ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹಲಸೂರು ಗೇಟ್‌ ಪೊಲೀಸರ ತನಿಖೆಯ ವೇಳೆ ಆಸ್ಪತ್ರೆ ಆಡಳಿತ ಮಾಹಿತಿ ನೀಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ಪರ ವಕೀಲರ ಕೋರಿಕೆಯ ಮೇರೆಗೆ ಅರ್ಜಿದಾರ ಮಹಿಳೆ ಜನಿಸಿದ್ದರೆನ್ನಲಾದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲೇನಿದೆ?
ಜರ್ಮನಿಯ ದಂಪತಿಗಳಾದ ಲುಟ್ಜ್ ಜೋಕಿಮ್ ವೈಸೆಂಡ್ಟ್ ಮತ್ತು ಸಿಗ್ರಿಡ್ ವೈಸೆಂಡ್ಟ್ ಅವರು 1978ರಲ್ಲಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಯ ಮೂಲಕ ಅನಿತಾ ಅವರನ್ನು ದತ್ತು ಪಡೆದಿದ್ದರು. ಬೆಂಗಳೂರಿನ ಸತ್ರ ನ್ಯಾಯಾಲಯವು ಗಾರ್ಡಿಯನ್ಸ್‌ ಮತ್ತು ವಾರ್ಡ್ಸ್‌ ಕಾಯಿದೆ 1890ರ ಸೆಕ್ಷನ್‌ಗಳಾದ 7, 10 ಮತ್ತು 26ರ ಅಡಿ 1978ರ ಆಗಸ್ಟ್‌ 9ರಂದು ದಂಪತಿಗೆ ಅನಿತಾ ಅವರ ಪೋಷಕತ್ವ ಒದಗಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅನಿತಾ ಅವರು 1978ರ ಮಾರ್ಚ್‌ 3ರಂದು ಜನಿಸಿದ್ದು, ಅವರ ಹೆತ್ತ ತಾಯಿ 1978ರ ಮಾರ್ಚ್‌ 26ರಂದು ಪ್ರಸವ ನಂತರದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಮಗುವನ್ನು ಬೆಳೆಸಲು ಕಷ್ಟವಾಗುತ್ತದೆ ಎಂದು ಅನಿತಾ ಅವರ ತಂದೆ ಮಗುವನ್ನು ಆಸ್ಪತ್ರೆಯ ಸುಪರ್ದಿಗೆ ನೀಡಿದ್ದರು. ಈ ನಡುವೆ, ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಯು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾಯಿಯ ಮರಣದ ನಂತರ ಮಗುವನ್ನು ಆಸ್ಪತ್ರೆಗೆ ತರಲಾಗಿದ್ದು, ದತ್ತು ನೀಡುವವರೆಗೆ ಐದು ತಿಂಗಳು ಅದು ಆಸ್ಪತ್ರೆಯಲ್ಲಿತ್ತು ಎಂದು ವಿವರಿಸಲಾಗಿದೆ.

ಮಗುವಿನ ತಂದೆ ಮಗುವನ್ನು ಆಸ್ಪತ್ರೆಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆತ ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ದಿನಾಂಕವಿಲ್ಲದ ಪತ್ರದಲ್ಲಿ ತಾಯಿಯ ಬಗ್ಗೆ ಉಲ್ಲೇಖವಿಲ್ಲ. ಅವರು ಎಲ್ಲಿ ನಿಧನರಾದರು ಎಂಬ ಸ್ಪಷ್ಟತೆ ಇಲ್ಲ. ಯಾರು ಮಗುವನ್ನು ಆಸ್ಪತ್ರೆಗೆ ತಂದರು ಎಂಬ ಮಾಹಿತಿಯೂ ಇಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ವಾಸ್ತವಿಕ ಅಂಶಗಳನ್ನು ಮರೆಮಾಚಿ, ದತ್ತು ಪ್ರಕ್ರಿಯೆಯಲ್ಲಿ ಲೋಪಗಳನ್ನು ಎಸಗಲಾಗಿದೆ. ಮಗುವನ್ನು ನೀಡುವುದಕ್ಕೆ ಸಂಬಂಧಿಸಿದ ಪತ್ರ, ಪೋಷಕರ ಒಪ್ಪಿಗೆ, ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸಲಾಗಿಲ್ಲ. ದತ್ತು ಪ್ರಕ್ರಿಯೆಯು ಹಿಂದು ದತ್ತು ಮತ್ತು ನಿರ್ವಹಣಾ ಕಾಯ್ದೆ 1956ರ ನಿಬಂಧನೆಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇದೆ. ಸಂಬಂಧಿತರು ಮಹತ್ವದ ದಾಖಲೆಗಳನ್ನು ಜತನದಿಂದ ಕಾಪಿಡಲು ವಿಫಲರಾಗಿದ್ದಾರೆ. ಈ ಸಂಬಂಧ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನಿತಾ ಅರ್ಜಿಯಲ್ಲಿ ವಿವರಿಸಿದ್ದಾರೆ.

ಜೀವನಪೂರ್ತಿ ನನ್ನ ಗುರುತು ಪತ್ತೆಯಲ್ಲಿ ನಿರತರಾಗಿದ್ದು, ಹಲವು ಬಾರಿ ಭಾರತಕ್ಕೆ ಬಂದಿರುವ ನಾನು ಮಾಹಿತಿ ಕೋರಿ ಹಲವು ಬಾರಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ನನ್ನ ಹೆತ್ತವರ ಬಗ್ಗೆ ಮಾಹಿತಿ ನೀಡದೇ ಇರುವುದು ಭಾವನಾತ್ಮಕ ಒತ್ತಡ ಸೃಷ್ಟಿಸಿದ್ದು, ನನ್ನ ಮೂಲದ ಬಗ್ಗೆ ಮಾಹಿತಿ ಪಡೆಯುವುದನ್ನು ನಿರಾಕರಿಸಲಾಗಿದೆ ಎಂದು ಅನಿತಾ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

Related Articles

Comments (0)

Leave a Comment