ಕೃತಿಚೌರ್ಯದ ಆರೋಪ ಪರಿಶೀಲಿಸುವ ಅಧಿಕಾರ ಸಿಬಿಎಫ್‌ಸಿಗೆ ಇಲ್ಲ; ದುರಂಧರ್ -2 ಚಿತ್ರದ ಕಥೆ ಕಳವು ವಿವಾದ ಕುರಿತ ಅರ್ಜಿ ವಜಾ

ಬೆಂಗಳೂರು: ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕಥೆ ಕಳವು ಅಥವಾ ಕೃತಿಚೌರ್ಯದ (Plagiarism) ಆರೋಪಗಳನ್ನು ಪರಿಶೀಲಿಸುವ ಅಧಿಕಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ರಣವೀರ್ ಸಿಂಗ್ ಅಭಿನಯದ ‘ಧುರಂಧರ್-2 ದಿ ರಿವೆಂಜ್’ ಚಿತ್ರದ ಕಥೆ ಕಳವು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಲೇಖಕ ಹಾಗೂ ನಿರ್ದೇಶಕ ಸಂತೋಷ್ ಕುಮಾರ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ‘ಡಿ.ಸಾಹೇಬ್‌’ ಎಂಬ ದೇಶಭಕ್ತಿ ಪ್ರಧಾನ ಕಥೆಯನ್ನು ನಕಲು ಮಾಡಿ ದುರಂಧರ್-2 ಚಿತ್ರ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರಲ್ಲದೆ, ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪ್ರಮಾಣಪತ್ರ ರದ್ದುಪಡಿಸಲು ಸಿಬಿಎಫ್​ಸಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

​ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚಲನಚಿತ್ರದ ಕಥೆ ಕಳವಿಗೆ ಸಂಬಂಧಿಸಿದ ಆರೋಪವಾಗಿದೆ. ಇದು ಕೃತಿಚೌರ್ಯ ವಿಚಾರಕ್ಕೆ ಸಂಬಂಧಿಸಿದ್ದು, ಖಾಸಗಿ ಹಕ್ಕಿಗೆ ಸಂಬಂಧಪಟ್ಟಿರುವ ಪ್ರಕರಣವಾಗಿದೆ. ಇಂಥ ವಿಚಾರಗಳ ಕುರಿತು ಪರಿಶೀಲನೆ ನಡೆಸುವುದಕ್ಕೆ ಸಿಬಿಎಫ್​ಸಿಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಹೈಕೋರ್ಟ್ ಆದೇಶವೇನು?
ಸಿನಿಮಾಟೋಗ್ರಫ್ ಕಾಯ್ದೆಯಡಿ ಕಾರ್ಯನಿರ್ವಹಿಸುವ ಸಿಬಿಎಫ್‌ಸಿ, ಒಂದು ಚಿತ್ರ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ. ಕಥೆಯ ಮಾಲೀಕತ್ವ ಅಥವಾ ಖಾಸಗಿ ಹಕ್ಕುಗಳ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಅದು ಹೊಂದಿಲ್ಲ. ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸ್ಪಷ್ಟವಾದ ಅನ್ಯಾಯ ಅಥವಾ ಕಾನೂನು ಉಲ್ಲಂಘನೆಯಾಗಿದ್ದರೆ ಮಾತ್ರ ಹೈಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯ. ಕೇವಲ ಕಥೆ ಕಳವು ಆರೋಪದ ಮೇಲೆ ಸೆನ್ಸಾರ್ ಮಂಡಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಕಥೆ ಕಳವು ಆರೋಪವು ಸಂಪೂರ್ಣವಾಗಿ ವೈಯಕ್ತಿಕ ಅಥವಾ ಖಾಸಗಿ ಹಕ್ಕಿಗೆ ಸಂಬಂಧಪಟ್ಟ ವಿಷಯವಾಗಿದೆ. ಎರಡು ಕಥೆಗಳ ನಡುವೆ ಸಾಮ್ಯತೆ ಇದೆಯೇ ಎಂಬುದನ್ನು ಸಾಕ್ಷ್ಯಧಾರಗಳ ಮೂಲಕ ಸಿವಿಲ್ ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾಗುತ್ತದೆ. ಕೃತಿಚೌರ್ಯದ ಸತ್ಯಾಸತ್ಯತೆ ವಿಚಾರಣೆಯಿಂದ ಮಾತ್ರ ಹೊರಬರಲು ಸಾಧ್ಯ. ಕಥೆಯ ಹಕ್ಕು ತಮಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆಯಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ.

Related Articles

Comments (0)

Leave a Comment