ಮುಟ್ಟಿನ ರಜೆ ನೀತಿಯನ್ನು ಎಲ್ಲ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- April 15, 2026
- 15 Views
ಬೆಂಗಳೂರು/ಧಾರವಾಡ: ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಧಾರವಾಢದಲ್ಲಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಪೀಠ, ಅಸಂಘಟಿತ ವಲಯ ಸೇರಿ ಎಲ್ಲ ವಲಯಗಳಲ್ಲೂ ಸರ್ಕಾರ ತನ್ನ ನೀತಿ ಜಾರಿಗೊಳಿಸುವುದನ್ನು ಖಾತ್ರಿಪಡಿಸಬೇಕು. ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ಮುಟ್ಟಿನ ರಜೆಯ ನೀತಿ ಮತ್ತು ಇದರ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿ ವಿಸ್ತರಿಸಲಾಗಿದೆ ಎಂದು ಹೇಳಿದೆ.
ಕಾನೂನಿನಲ್ಲಿ ಸಮಾನರಾದರೂ ಜೈವಿಕವಾಗಿ ಭಿನ್ನ:
ಮಹಿಳೆ ಮತ್ತು ಪುರುಷ ಇಬ್ಬರೂ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕ ಅನುಭವಗಳು ಅವರನ್ನು ಪ್ರತ್ಯೇಕಿಸುತ್ತವೆ. ಆದ್ದರಿಂದ, ಮುಟ್ಟಿನ ರಜೆಯ ಮನವಿಯು ವಿಶೇಷದ ವಿಚಾರವಲ್ಲ. ಬದಲಿಗೆ ಅದು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು; ಆದರೂ, ಅವರು ಜೈವಿಕವಾಗಿ ಭಿನ್ನರು. ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು, ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಮಾನತೆಯ ಗ್ಯಾರಂಟಿಯನ್ನು ತುಳಿಯುವುದಕ್ಕೆ ಬದಲಾಗಿ ಗಣನೀಯ ಅರ್ಥವನ್ನು ನೀಡುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವೇನು?
ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು.
ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರ್ಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಯ ಪರವಾಗಿ ವಕೀಲೆ ದೀಕ್ಷಾ ಅಮೃತೇಶ್ ವಾದಿಸಿದ್ದರು.
ಇನ್ನು ರಾಜ್ಯ ಸರ್ಕಾರದ ನೀತಿಯನ್ನು ಪ್ರಶ್ನಿಸಿ ಹಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಏಕಸದಸ್ಯ ನ್ಯಾಯಪೀಠ ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
Related Articles
Thank you for your comment. It is awaiting moderation.



Comments (0)