ನರ್ಸ್ ಆತ್ಮಹತ್ಯೆ ಪ್ರಕರಣ; ಅರಿವಳಿಕೆ ತಜ್ಞೆ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
- by Jagan Ramesh
- April 8, 2026
- 112 Views
ಬೆಂಗಳೂರು: ನರ್ಸ್ ಒಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರಿವಳಿಕೆ ತಜ್ಞೆಯ (ಅನಸ್ತೇಷಿಯಾಲಜಿಸ್ಟ್) ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಇದೇ ವೇಳೆ, ಮೃತ ನರ್ಸ್ ಹಾಗೂ ಅರಿವಳಿಕೆ ತಜ್ಞೆಯೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿರುವ ವೈದ್ಯನ (ಮೊದಲನೇ ಆರೋಪಿ) ವಿರುದ್ಧದ ವಿಚಾರಣೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಿದೆ.
ಆತ್ಮಹತ್ಯೆಗೆ ಶರಣಾದ ನರ್ಸ್ ಬರೆದಿದ್ದ ಡೆತ್ ನೋಟ್ ಆಧರಿಸಿ ಜೆ.ಪಿ.ನಗರ ಪ್ರದೇಶದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ 30ನೇ ಎಸಿಜೆಎಂ ರದ್ದುಪಡಿಸುವಂತೆ ಕೋರಿ ಅಸ್ಸಾಂ ಮೂಲದ ಅರಿವಳಿಕೆ ತಜ್ಞೆ ಹೈಕೋರ್ಟ್‌ಗೆ ಅರ್ಜಿ ಅಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರೆ ಹಾಗೂ ತನ್ನೊಂದಿಗೆ ವೈದ್ಯ ಅನೈತಿಕ ಸಂಬಂಧ ಹೊಂದಿರುವ ವಿಷಯ ನರ್ಸ್‌ಗೆ ತಿಳಿದು, ಇದೇ ವಿಚಾರವಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಅರ್ಜಿದಾರೆಯಾದ ಅರಿವಳಿಕೆ ತಜ್ಞೆಯ ಪಾತ್ರ ಸೀಮಿತವಾಗಿದೆ. ವೈದ್ಯನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಿಟ್ಟರೆ ಅರ್ಜಿದಾರೆಯದು ಬೇರೆ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಅರ್ಜಿದಾರೆಯ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಆದರೆ, ಮೃತ ನರ್ಸ್ ಜತೆ ಅನೈತಿಕ ಸಂಬಂಧ ಹೊಂದಿದ್ದ ವೈದ್ಯ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಹಾಗೂ ದೂರುದಾರರಾದ ಮೃತ ನರ್ಸ್ ತಾಯಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ಖಾಸಗಿ ಆಸ್ಪತ್ರೆ ವೈದ್ಯ ಪೃಥ್ವಿ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಹಾಗೂ ಅರಿವಳಿಕೆ ತಜ್ಞೆ (ಅರ್ಜಿದಾರೆ) ಜತೆಗೆ ಅನೈತಿಕ ಸಂಪರ್ಕ ಹೊಂದಿದ್ದರು. ಅರಿವಳಿಕೆ ತಜ್ಞೆಯೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದ ನರ್ಸ್, ಆ ಕುರಿತು ವೈದ್ಯನನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ನರ್ಸ್ ಮೇಲೆ ವೈದ್ಯ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮನೆಯಲ್ಲಿ ನರ್ಸ್ ವೈದ್ಯನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರಿಂದ, ಮೃತಳ ತಾಯಿ ಮಗಳ ಸಾವಿಗೆ ಕಾರಣವಾದ ವೈದ್ಯ ಹಾಗೂ ಅರಿವಳಿಕೆ ತಜ್ಞೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಒಂದನೇ ಆರೋಪಿಯಾಗಿ ವೈದ್ಯ, ಎರಡನೇ ಆರೋಪಿಯಾಗಿ ಅರಿವಳಿಕೆ ತಜ್ಞೆಯ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣವನ್ನು ನಗರದ 30ನೇ ಎಸಿಜೆಎಂ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
Related Articles
Thank you for your comment. It is awaiting moderation.


Comments (0)