ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ; ಶಾಸಕ ಹ್ಯಾರಿಸ್ ವಿರುದ್ಧ ಕ್ರಮಕ್ಕೆ ಕೋರಿದ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್
- by Jagan Ramesh
- April 7, 2026
- 8 Views
ಬೆಂಗಳೂರು: ಅಮೆರಿಕ-ಇಸ್ರೆಲ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಖಮೇನಿ ಹತ್ಯೆಯಾಗಿರುವುದನ್ನು ಖಂಡಿಸಿ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಶಾಸಕ ಎನ್.ಎ. ಹ್ಯಾರಿಸ್ ವಿರುದ್ಧ ಪೊಲೀಸರು ಕ್ರಮ ಜರುಗಿಸದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಶಾಂತಿನಗರ ಶಾಸಕ ಹ್ಯಾರಿಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸುವಂತೆ ಕೋರಿ ಜಯನಗರ 1ನೇ ಬ್ಲಾಕ್ ನಿವಾಸಿಯಾದ ಬಜರಂಗದಳದ ನಿಕಟಪೂರ್ವ ಜಿಲ್ಲಾ ಸಂಯೋಜಕ ತೇಜಸ್ ಎ. ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಖಮೇನಿ ಹತ್ಯೆ ಖಂಡಿಸಿ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಆನೆಪಾಳ್ಯ, ರಿಚ್ಮಂಡ್ ಸರ್ಕಲ್ ಮತ್ತಿತರ ಕಡೆ ಶಾಸಕ ಹ್ಯಾರಿಸ್ ನೇತೃತ್ವದಲ್ಲಿ ಮಾರ್ಚ್ 1ರಂದು ಸಂಜೆ 6.30ಕ್ಕೆ ನೂರಾರು ಜನ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಲು ಪೊಲೀಸರಿಂದ ಪೂರ್ವಾನುಮತಿ ಪಡೆದಿಲ್ಲ. ಇದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರತಿಭಟನೆಯಿಂದ ಸಂಚಾರ ದಟ್ಟಣೆಯುಂಟಾಗಿ, ಸಾರ್ವಜನಿಕರಿಗೆ ಸಾಕಷ್ಟು ಅನನುಕೂಲ ಆಗಿದೆ. ಈ ಬಗ್ಗೆ ಮಾರ್ಚ್ 2ರಂದು ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ರವಿ ಅವರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ರವಿ ಹಾಗೂ ಶಾಸಕ ಹ್ಯಾರೀಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲು ಕೋರಿ ಸಲ್ಲಿಸಿದ್ದ ಮನವಿ ಆಧರಿಸಿ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೆಶಕರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಮನವಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.



Comments (0)