ಮಕ್ಕಳ ಭಿಕ್ಷಾಟನೆ; ಉನ್ನತ ಮಟ್ಟದ ಸಮಿತಿ ರಚನೆ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ
- by Prashanth Basavapatna
- April 4, 2026
- 10 Views
ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿರುವ ಹಾಗೂ ಬೀದಿಬದಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳನ್ನು ಪತ್ತೆ ಹಚ್ಚಿ ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಸೂಕ್ತ ಶಿಫಾರಸುಗಳನ್ನು ನೀಡಲು ಪೊಲೀಸ್ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ 12 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ರಸ್ತೆಗಳಲ್ಲಿ ಆಟಿಕೆ ಮತ್ತಿತರ ವಸ್ತುಗಳ ಮಾರಾಟಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ನ್ಯಾಯಪೀಠ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಮಸ್ಯೆ ನಿವಾರಣೆ ಸಂಬಂಧ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸುವ ಸಂಬಂಧ ಜನವರಿ 22ರಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಸರ್ಕಾರ ಆ ನಿಟ್ಟಿನಲ್ಲಿ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿತು.
ಸರ್ಕಾರದ ಪರ ವಕೀಕರು ಉತ್ತರಿಸಿ, ನ್ಯಾಯಾಲಯದ ನಿರ್ದೇಶನವನ್ನು ಪಾಲನೆ ಮಾಡಿಲ್ಲ. ನ್ಯಾಯಾಲಯದ ಮಧ್ಯಂತರ ಆದೇಶ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಇನ್ನೂ ಅಪ್‌ಲೋಡ್ ಆಗಿಲ್ಲ ಎಂದರು. ಆಗ ನ್ಯಾಯಪೀಠ, ಜನವರಿ 22ರ ಆದೇಶ ಏಕೆ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಆಗಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತು.
ಸರ್ಕಾರದ ಪರ ವಕೀಲರನ್ನು ಕುರಿತು, ಮೊದಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ. ಆನಂತರ ಇಲಾಖೆಗಳ ನಡುವೆ ಸಮನ್ವಯ ಸುಲಭವಾಗುತ್ತದೆ. ಕೋರ್ಟ್ ನಿರ್ದೇಶನಗಳನ್ನೂ ಸಹ ಸರ್ಮಪಕವಾಗಿ ಪಾಲನೆ ಮಾಡಬಹುದು ಎಂದು ನ್ಯಾಯಪೀಠ ಹೇಳಿತು.
ಈ ವೇಳೆ ಸರ್ಕಾರದ ಪರ ವಕೀಲರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಮಸ್ಯೆ ನಿವಾರಣೆಗೆ ಸರ್ಕಾರ ಮಾರ್ಚ್ 9ರಂದು 12 ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಆ ಸಮಿತಿ ಮಾರ್ಚ್ 18ರಂದು ಮೊದಲ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದೆ. ಸಮಿತಿಯಲ್ಲಿ ನಿಮ್ಹಾನ್ಸ್‌ನ ತಜ್ಞ ವೈದ್ಯರು, ಪೊಲೀಸ್ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ. ಸಮಿತಿ ರಚನೆ ಕುರಿತ ಆದೇಶ ಕನ್ನಡ ಭಾಷೆಯಲ್ಲಿದ್ದು, ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಪರ ವಕೀಲರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ನೆರವಾಗಲು ಕ್ರಿಯಾ ಯೋಜನೆ ಸಲ್ಲಿಸುವಂತೆ ಕಳೆದ ಬಾರಿ ನ್ಯಾಯಾಲಯ ಆದೇಶ ನೀಡಿತ್ತು. ಆ ಆದೇಶವನ್ನು ಸರ್ಕಾರ ಪಾಲನೆ ಮಾಡಿಲ್ಲ’ಎಂದರು. ಸರ್ಕಾರದ ಪರ ವಕೀಲರು, ಸಂಗ್ರಹ ಮಾಡಿದ ಭಿಕ್ಷುಕರ ಸೆಸ್ ಅನ್ನು ಪ್ರತ್ಯೇಕ ಖಾತೆಯಲ್ಲಿಡಲಾಗುತ್ತಿದ್ದು, ಅದು ನೇರವಾಗಿ ಮಕ್ಕಳ ಕಲ್ಯಾಣ ಇಲಾಖೆಗೆ ಹೋಗುತ್ತದೆ ಎಂದು ತಿಳಿಸಿದರು.
ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್, ಒಟ್ಟು 7 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಆದರೆ, ಕೇವಲ ಮೂರು ಕೋಟಿ ರೂ. ಗಳನ್ನು ಮಾತ್ರ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗಿದೆ ಎಂದರು.
ಅಂತಿಮವಾಗಿ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಎಷ್ಟು ಭಿಕ್ಷುಕರ (ಬೆಗ್ಗರಿ) ಸೆಸ್ ಸಂಗ್ರಹ ಮಾಡಲಾಗಿದೆ ಎಂಬ ಸಮಗ್ರ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)