ಬ್ಯಾಂಕ್ ಸಾಲ ಕೊಡಿಸುವ ನೆಪದಲ್ಲಿ ವಂಚನೆ; ಮೂವರು ಆರೋಪಿಗಳ ವಿರುದ್ಧದ 11 ಎಫ್ಐಆರ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್‌ ಪಡೆದು ಸುಮಾರು 40 ಕೋಟಿ ರೂ. ವಂಚನೆ ಎಸಗಿದ ಆರೋಪದಲ್ಲಿ ಮಂಗಳೂರು ಮೂಲದ ರೋಶನ್‌ ಸಲ್ಡಾನಾ ಮತ್ತವರ ಪತ್ನಿ ಡಾಫ್ನಿ ನೀತು ಡಿಸೋಜಾ ಹಾಗೂ ಚಿತ್ರದುರ್ಗದ ಎನ್‌. ಚಂದ್ರಶೇಖರ್‌ ವಿರುದ್ಧದ 11 ಎಫ್‌ಐಆರ್‌ಗಳನ್ನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹಲವರಿಂದ ಕಮಿಷನ್‌ ಪಡೆದು ಮೋಸ ಮಾಡಿರುವುದರಿಂದ ಈ ಹಂತದಲ್ಲಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರ ವಿರುದ್ಧದ ಪ್ರಕರಣವಿನ್ನೂ ತನಿಖಾ ಹಂತದಲ್ಲಿದೆ. ಆರೋಪಿಗಳು ಇದೀಗ ನ್ಯಾಯಾಲಯದ ಮುಂದೆ ತಮ್ಮ ಮೇಲೆ ದಾಖಲಾಗಿರುವ ಅಪರಾಧಗಳನ್ನು ಪ್ರಶ್ನಿದ್ದಾರೆ. ಆರೋಪಿಗಳಿಂದ ಹಣವನ್ನು ವಸೂಲಿ ಮಾಡಲು ಕ್ರಿಮಿನಲ್‌ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಎಫ್‌ಐಆರ್‌ ಅಪರಾಧವಲ್ಲ, ಆರೋಪಗಳ ಬಗ್ಗೆ ತನಿಖೆ ನಡೆಯಬೇಕು ಎಂಬುದು ಕಾನೂನಿನ ಸ್ಪಷ್ಟ ನಿಯಮವಾಗಿದೆ. ಆದ್ದರಿಂದ, ಈ ಹಂತದಲ್ಲಿ ಮಧ್ಯಪ್ರವೇಶಿಸಲಾಗದು. ಆರೋಪಿಗಳು ಹಲವರೊಂದಿಗೆ ಆರ್ಥಿಕ ವಹಿವಾಟು ನಡೆಸಿ ವಂಚಿಸಿದ್ದಾರೆಂದು ಹೇಳಲಾಗುತ್ತಿದೆ. ಆದ್ದರಿಂದ, ಅಂತಹ ಪ್ರಕರಣಗಳಲ್ಲಿ ತನಿಖೆಗೆ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಇದೊಂದು ಸಂಪೂರ್ಣ ಸಿವಿಲ್‌ ವಹಿವಾಟು ಆಗಿದ್ದು, ಅರ್ಜಿದಾರ ಆರೋಪಿಗಳು ಯಾವುದೇ ಸಂಬಂಧ ಹೊಂದಿರದ ಬ್ಯಾಂಕ್ ಖಾತೆಗಳಿಗೆ ದೂರುದಾರರು ಹಣ ಜಮೆ ಮಾಡಿದ್ದಾರೆ. ಅದಕ್ಕೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಆದರೆ, ಆ ಬಗ್ಗೆ ತನಿಖೆ ನಡೆಯಬೇಕಿದೆ. ಏಕೆಂದರೆ, ಇದು ಯಾವುದೋ ಒಂದು ಪ್ರಕರಣ ಅಥವಾ ಯಾರೋ ಒಬ್ಬ ದೂರುದಾರ ದಾಖಲಿಸಿರುವ ಪ್ರಕರಣವಲ್ಲ. ಮೂವರು ಆರೋಪಿಗಳ ವಿರುದ್ಧ ಬೇರೆ ಬೇರೆ ದೂರುದಾರರಿಂದ 11 ದೂರುಗಳು ಬಂದಿವೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?
ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿರುವಂತೆ ಮೂವರು ಅರ್ಜಿದಾರರು ಒಂದೇ ಬಗೆಯ ಕಾರ್ಯಾಚರಣೆ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅವರು ಹಣದ ಅಗತ್ಯವಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಟ್ರ್ಯಾಕ್‌ ಮಾಡುತ್ತಾರೆ ಮತ್ತು ಅವರ ಸಮಸ್ಯೆಯನ್ನು ಪರಿಹರಿಸಿ, ಅವರ ಖಾತೆಗಳಿಗೆ ಹಣ ವರ್ಗಾಯಿಸುವ ಭರವಸೆ ನೀಡುತ್ತಾರೆ. ಅವರಿಂದ ಮೊದಲೇ ಕಮಿಷನ್‌ ಹಣ ಪಡೆದು ವಂಚಿಸುತ್ತಿದ್ದರೆನ್ನಲಾಗಿದೆ.

ಆರೋಪಿಗಳ ವಿರುದ್ಧ ಉತ್ತರ ಪ್ರದೇಶದ ಸಿದ್ಧಾರ್ಥ್‌ ಮೋಹನ್‌, ಜೈಕರ್‌ರೆಡ್ಡಿ ವೆದಿರೆ, ಹೈದರಾಬಾದ್‌ನ ಅಜಯ ನಾಯ್ಡು, ರಾಜೀವ್‌ ಶರ್ಮಾ, ಮುಂಬೈನ ನವೀನ್‌ ಚಂದ್ರ ಪಟೇಲ್‌, ಬೆಂಗಳೂರಿನ ನಂದಿನಿ, ಆರ್‌. ಮಂಜುನಾಥ್‌, ತಿಲಕ್‌ ದತ್‌ ಚೌದರಿ, ಆಂಧ್ರಪ್ರದೇಶದ ವೈ.ಎನ್‌. ಕೃಷ್ಣಮೂರ್ತಿ, ಕೇರಳದ ಕೆ. ಅಜಯ್‌ಕುಮಾರ್‌ ಹಾಗೂ ಮಹಾರಾಷ್ಟ್ರದ ಶಿವ ಕೃಷ್ಣಮೂರ್ತಿ ಅಯ್ಯರ್‌ ಅವರು ಮುಂಬೈ, ಬೆಂಗಳೂರು, ಹೈದರಾಬಾದ್‌ ಮತ್ತು ಕೇರಳ ಸೇರಿ ವಿವಿಧೆಡೆ ಸಿಇಎನ್ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. ಆ ದೂರುಗಳನ್ನು ಆಧರಿಸಿ 11 ಎಫ್‌ಐಆರ್‌ಗಳನ್ನು ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಲಾಗಿತ್ತು. ಅವುಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment