ಬ್ರೂವರೀಸ್ಗಳಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು; ಹೈಕೋರ್ಟ್ ಮಹತ್ವದ ತೀರ್ಪು
- by Jagan Ramesh
- March 25, 2026
- 13 Views
ಬೆಂಗಳೂರು: ಅಪ್ರಾಪ್ತ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಮದ್ಯಪಾನ-ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ರಾಜರಾಜೇಶ್ವರಿ ನಗರದ ಲೆಗಸಿ ಬ್ರೂಯಿಂಗ್ ಕಂಪನಿಯ ಪಾಲುದಾರ ವಿ. ಚಿಟ್ಟಿಬಾಬು ಎಂಬುವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಬ್ರೂವರೀಸ್ ಮತ್ತು ಅಂತಹುದೇ ಸಂಸ್ಥೆಗಳು ತಮ್ಮಲ್ಲಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಮಹತ್ವದ ತೀರ್ಪು ನೀಡಿದೆ.
ಶಾಲಾ ವಿದ್ಯಾರ್ಥಿ ರೆಯಾನ್ ಜೇಕಬ್ (15) ಎಂಬಾತ 2026ರ ಜನವರಿ 31ರಂದು ಲೆಗಸಿ ಬ್ರೂಯಿಂಗ್ ಕಂಪನಿಯಲ್ಲಿ (Legacy Brewing Company) ಮದ್ಯ ಸೇವಿಸಿದ ನಂತರ ತನ್ನ ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ, ಕಂಪನಿಯ ಪಾಲುದಾರ ಚಿಟ್ಟಿಬಾಬು ವಿರುದ್ಧ ಅಪ್ತಾಪ ಬಾಲಕನಿಗೆ ಮದ್ಯಪಾನ ಮಾಡಲು ಅವಕಾಶ ಕಲ್ಪಿಸಿದ ಆರೋಪದಲ್ಲಿ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದನ್ನು ರದ್ದುಕೋರಿ ಚಿಟ್ಟಿಬಾಬು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ವಯಸ್ಸಿನ ಪರಿಶೀಲನೆ ಇಲ್ಲದೆ ಅಪ್ರಾಪ್ತ ವಯಸ್ಕರು ಹೇಗೆ ಲೆಗಸಿ ಬ್ರೂಯಿಂಗ್ ಲಿಮಿಟೆಡ್ನ ಪ್ರವೇಶ ಪಡೆದರು? ದಾಖಲೆಗಳ ಗುರುತನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನ ಅಸ್ತಿತ್ವದಲ್ಲಿದೆಯೇ? ಈ ವಿಚಾರದಲ್ಲಿ ಮೇಲ್ವಿಚಾರಣಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆಯೇ? ಮತ್ತು ಮದ್ಯ ಪರವಾನಗಿದಾರರು ತಮ್ಮ ಮೇಲೆ ವಿಧಿಸಲಾಗಿರುವ ಶಾಸನಬದ್ಧ ಹೊಣೆಗಾರಿಕೆಗಳನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಬ್ರೂವರೀಸ್ ಮತ್ತು ಅಂತಹುದೇ ಸಂಸ್ಥೆಗಳು ಗ್ರಾಹಕರ ಪ್ರವೇಶದ ಸಂದರ್ಭದಲ್ಲಿ ಆಧಾರ್ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಕಠಿಣವಾಗಿ ವಯಸ್ಸು ಪರಿಶೀಲನಾ ಪ್ರೋಟೋಕಾಲ್ ಆರಂಭಿಸಬೇಕು. ಯುವಕರು ಅಥವಾ ಅಪ್ರಾಪ್ತ ವಯಸ್ಕರು ಮದ್ಯ ನೀಡಲು ಕೋರಿದಾಗ ಅವರ ವಯಸ್ಸಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು. ಬ್ರೂವರೀಸ್ ಅಥವಾ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳಲ್ಲಿ ವಯಸ್ಸಿನ ಪರಿಶೀಲನೆಯನ್ನು ಕಾಟಾಚಾರ ಅಥವಾ ಉದಾಸೀನತೆಯಿಂದ ಮಾಡಬಾರದು. ಅಪ್ರಾಪ್ತರು ಮದ್ಯಪಾನ ಮಾಡಬಾರದು. ಅಪ್ತಾಪ್ತರಿಗೆ ಮದ್ಯ ಸರಬರಾಜು ಮಾಡುವುದಿಲ್ಲ ಎಂಬ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅಪ್ರಾಪ್ತ ವಯಸ್ಕರು ಪ್ರವೇಶಿಸಿ, ಮದ್ಯ/ಮಾದಕ ವಸ್ತುಗಳನ್ನು ಪೂರೈಸಲು ಕೋರಿದಾಗ, ಬಹಿರಂಗವಾಗಿ ಅಥವಾ ರಹಸ್ಯವಾಗಿ ಸೇವನೆ ಮಾಡಿದಾಗ ಬ್ರೂವರೀಸ್ ಸಂಸ್ಥೆಗಳ ಆಡಳಿತ ಮಂಡಳಿಯವರು ಉದಾಸೀನತೆ ತೋರಬಾರದು. ಯುವಕರ ರಕ್ಷಣೆ ಕೇವಲ ಶಾಸನಬದ್ಧ ಕರ್ತವ್ಯವಲ್ಲ. ಅದು ನೈತಿಕವಾಗಿ ಕಡ್ಡಾಯವಾಗಿದೆ. ಈ ವಿಚಾರದಲ್ಲಿ ಯಾವುದೇ ತಪ್ಪು ಸಂಭವಿಸಿದರೂ ಅಂತಹ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಎಫ್ಐಆರ್ ರದ್ದತಿಗೆ ನಕಾರ:
ಹಾಲಿ ಪ್ರಕರಣದಲ್ಲಿ 15 ವರ್ಷದ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದಿದ್ದು, ಮೊದಲೇ ಮದ್ಯ ಖರೀದಿಸಿ ತನ್ನ ಬ್ಯಾಗಿನಲ್ಲಿಟ್ಟುಕೊಂಡು ಬಂದಿದ್ದ. ಖಾಲಿಯಿದ್ದ ಮೇಜಿನ ಕೆಳಗೆ ಕೂತು ಮದ್ಯ ಸೇವಿಸಿ ಲೆಗಸಿ ಬ್ರೂಯಿಂಗ್ ಕಂಪನಿ ಆವರಣದಿಂದ ಹೊರ ನಡೆದಿದ್ದಾನೆ. ಇದರಿಂದ, ಬಾಲಕ ಏನು ಸೇವಿಸಿದ್ದ ಎಂದು ಅರ್ಜಿದಾರರು ಅಥವಾ ಕಂಪನಿಯ ಸಿಬ್ಬಂದಿಗೆ ತಿಳಿದಿಲ್ಲ. 18ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಂಪನಿ ಮದ್ಯ ಸರಬರಾಜು ಮಾಡುವುದಿಲ್ಲ. ಅಬಕಾರಿ ಕಾಯ್ದೆಯು ಮದ್ಯ ಸರಬರಾಜಿಗೆ ಶಿಕ್ಷಿಸುತ್ತದೆ ಹೊರತು ಸೇವನೆಗೆ ಅಲ್ಲ. ಆದ್ದರಿಂದ, ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಮದ್ಯ ಮಾರಾಟ ಪರವಾನಗಿ ಪಡೆದವರ ಮೇಲೆ ಅಪ್ರಾಪ್ತ ವಯಸ್ಕರಿಗೆ ಸರಬರಾಜು ತಡೆಯುವ ಬಾದ್ಯತೆ ಮಾತ್ರವಲ್ಲದೆ, ಮಾದಕ ದ್ರವ್ಯಗಳನ್ನು ಮಾರಾಟ ಮಾಡುವ ಅಥವಾ ತಯಾರಿಸುವ ಆವರಣದಲ್ಲಿ ಅಪ್ರಾಪ್ತ ವಯಸ್ಕರು ಉಳಿಯದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ಕಾನೂನು ಹೇರುತ್ತದೆ. ಬ್ರೂವರಿ ಮಾರಾಟ ಮತ್ತು ತಯಾರಿಕೆ ಆವರಣಕ್ಕೆ ಅಪ್ರಾಪ್ತ ವಯಸ್ಸಿನ ಹುಡುಗರಿಗೆ ಪ್ರವೇಶವನ್ನು ಅನುಮತಿಸಿರುವುದು ಕಳವಳ ಉಂಟು ಮಾಡುವಂತಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದಲ್ಲಿ ಮದ್ಯ ಸೇವೆನೆಯಿಂದ ದುರದುಷ್ಟವಶಾತ್ ಬಾಲಕನ ಸಾವು ಸಂಭವಿಸಿದೆ. ಮೃತದೇಹದಲ್ಲಿ ಮದ್ಯದ ಅಂಶ (ಆಲ್ಕೋಹಾಲ್) ಮತ್ತೆಯಾಗಿರುವುದನ್ನು ತಳ್ಳಿಹಾಕಲಾಗದು. ಅರ್ಜಿದಾರರ ಸಂಸ್ಥೆಯ ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ಅರಿವಿಲ್ಲದೆ ಬಾಲಕ ಮದ್ಯ ಸೇವಿಸಿದ್ದಾನೆ ಎಂಬ ವಾದವೇ ವಿಚಾರಣೆಗೆ ಒಳಪಡುವಂತಹದ್ದು. ಆದ್ದರಿಂದ, ಪ್ರಕರಣದ ತನಿಖೆ ಮುಂದುವರಿಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ.
Related Articles
Thank you for your comment. It is awaiting moderation.


Comments (0)