ಅತಿಥಿ ಶಿಕ್ಷಕಿಗೆ ಲೈಂಗಿಕ ದೌರ್ಜನ್ಯ; ಸರ್ಕಾರಿ ಪ್ರೌಢಶಾಲೆ ಶಿಕ್ಷಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- March 18, 2026
- 15 Views
ಬೆಂಗಳೂರು: ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಒಂದು ವರ್ಷಕ್ಕೂ ಅಧಿಕ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಆಕೆಯ ನಗ್ನ ಚಿತ್ರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದಾಗಿ ಬೆದರಿಸಿ ಹಲವು ಬಾರಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ ಎದುರಿಸುತ್ತಿರುವ ಸರ್ಕಾರಿ ಪ್ರೌಢಶಾಲೆ ಶಿಕ್ಷಕರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಶಿಕಾರಿಪುರದ ಸರ್ಕಾರಿ ಪ್ರೌಢಶಾಲೆಯ ಕಾಯಂ ಶಿಕ್ಷಕ ಲಿಂಗರಾಜು ನಾಯ್ಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯದ ತೀರ್ಪು:
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ, ಇದು ಪರಸ್ಪರ ಒಪ್ಪಿಗೆಯ ಸಂಬಂಧವಲ್ಲ. ಬದಲಿಗೆ, ಪ್ರಾಬಲ್ಯ, ಭಯ ಮತ್ತು ಬಲವಂತದ ನೆರಳಿನಲ್ಲಿರುವ ಸಂಬಂಧವೆಂದು ತೋರುತ್ತದೆ. ಆರೋಪಿಯು ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ದೂರುದಾರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ಅವುಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆಯೊಡ್ಡುವ ಮೂಲಕ ಒತ್ತಾಯದ ದೈಹಿಕ ಸಂಪರ್ಕ ಹೊಂದಿದ್ದಾನೆ. ಉದ್ಯೋಗ ಕಳೆದುಕೊಳ್ಳುವ ಭಯ ಮತ್ತು ಸಾರ್ವಜನಿಕವಾಗಿ ಉಂಟಾಗಬಹುದಾದ ಅವಮಾನದ ಭೀತಿಗಳ ನಡುವೆಯೂ ಸಂತ್ರಸ್ತೆಯ ಲೈಂಗಿಕ ಸಹಕಾರ ಪಡೆಯಲು ಯತ್ನಿಸಿದ್ದಾನೆ. ಇದನ್ನು ಸಮ್ಮತಿಯ ಸಂಬಂಧ ಎನ್ನಲಾಗದು. ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಈ ಹಂತದಲ್ಲಿ ರದ್ದುಪಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಆರೋಪಿಯ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕಿದ್ದು, ಆತ ಪೂರ್ಣಪ್ರಮಾಣದ ವಿಚಾರಣೆ ಎದುರಿಸಲಿ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?
ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, ದೂರುದಾರೆಯು ಶಿಕಾರಿಪುರದ ಸರ್ಕಾರಿ ಶಾಲೆಯೊಂದಕ್ಕೆ 2023ರಲ್ಲಿ ಅತಿಥಿ ಶಿಕ್ಷಕಿಯಾಗಿ ಸೇರ್ಪಡೆಯಾಗಿದ್ದರು. ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ಅರ್ಜಿದಾರ ಹಾಗೂ ದೂರುದಾರೆಯ ನಡುವೆ ಪರಿಚಯ ಬೆಳೆದಿತ್ತು. ಬಳಿಕ ಆಕೆಯೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದ್ದ ಅರ್ಜಿದಾರ, ಆಕೆಯನ್ನು ಕಚೇರಿಗೆ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನಲ್ಲದೆ, ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿನ್ನ ವಿರುದ್ಧವೇ ದೂರು ನೀಡಿ ಕೆಲಸದಿಂದ ತೆಗೆಸುವುದಾಗಿ ಬೆದರಿಸುತ್ತಿದ್ದ.
ಅತಿಥಿ ಶಿಕ್ಷಕಿಯನ್ನು ಒತ್ತಾಯಿಸಿ ಆಕೆಯ ನಗ್ನ ಚಿತ್ರಗಳನ್ನು ಪಡೆದುಕೊಂಡ ಆರೋಪಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ಆಕೆಯ ಮನೆ, ಶಾಲೆ ಸೇರಿ ವಿವಿಧ ಸ್ಥಳಗಳಲ್ಲಿ ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಬಡ ಕುಡುಂಬದ ಸಂತ್ರಸ್ತೆಯು ತಿಂಗಳಿಗೆ 10 ಸಾವಿರ ರೂ. ವೇತನದ ಉದ್ಯೋಗ ಕಳೆದುಕೊಳ್ಳಬಾರದು ಎಂಬ ಕಾರಣದಿಂದ ವಿಷಯವನ್ನು ಬಹಿರಂಗಪಡಿಸದೇ ದೌರ್ಜನ್ಯಗಳನ್ನು ಸಹಿಸಿಕೊಂಡು ಪತಿ ಹಾಗೂ ಮಕ್ಕಳಿಗೆ ತಿಳಿಸುವುದಕ್ಕೆ ಮುಂದಾಗಿರಲಿಲ್ಲ. ಆದರೆ, ದೂರುದಾರರ ಕೊರಗನ್ನು ನೋಡಿದ್ದ ಆಕೆ ಪತಿ ವಿಚಾರಿಸಿದಾಗ ಧೈರ್ಯ ಮಾಡಿಕೊಂಡು ಪತಿಗೆ ಎಲ್ಲ ವಿಷಯವನ್ನೂ ತಿಳಿಸಿದ್ದರು. ಬಳಿಕ ಶಿಕ್ಷಕನ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ಆಧರಿಸಿ ಶಿಕ್ಷಕನ ವಿರುದ್ಧ ಅಕ್ರಮ ಸಂಬಂಧ ಬೆಳೆಸಲು ಒತ್ತಾಯಿಸಿ ಮಹಿಳೆಯ ಅಪಹರಣ, ಅತ್ಯಾಚಾರ, ಉದ್ದೇಶಪೂರ್ವಕ ಅವಮಾನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು, ತನಿಖೆ ನಡೆಸಿ ಸಾಕ್ಷ್ಯಾಧಾರಗಳೊಂದಿಗೆ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿ ಶಿಕ್ಷಕ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)