ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು; ಅಂತಿಮ ವರದಿ ಸಲ್ಲಿಕೆಗೆ ಏ.29ರವರೆಗೆ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿನ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವವರು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಕುರಿತ ಮಾಹಿತಿ ಒಳಗೊಂಡ ಅಂತಿಮ ವರದಿ ಸಲ್ಲಿಸಲು ಪ್ರಕರಣದ ಅಮೈಕಸ್‌ ಕ್ಯೂರಿಗೆ ಹೈಕೋರ್ಟ್‌ ಏಪ್ರಿಲ್ 29ರವರೆಗೆ ಕಾಲಾವಕಾಶ ನೀಡಿದೆ.

ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣ ಅಮೈಕಸ್ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರು, ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿ ಒಳಗೊಂಡ ಅಂತಿಮ ವರದಿಯನ್ನು ಎರಡು-ಮೂರು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಆದರೆ, ನಿರಾಶ್ರಿತರು ತಾವಿದ್ದ ಜಾಗ ತೊರೆದು ಪುನರ್ವಸತಿ ಕೇಂದ್ರಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಬಡಾವಣೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ಪುನರ್ವಸತಿ ವ್ಯವಸ್ಥೆ ಕುರಿತು ಅಂತಿಮ ವರದಿ ಸಲ್ಲಿಸಲು ಏಪ್ರಿಲ್ 29ರವರೆಗೆ ಅಮೈಕಸ್‌ ಕ್ಯೂರಿ ಅವರಿಗೆ ಕಾಲಾವಕಾಶ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment