ಸರಗಳ್ಳತನದ ಆರೋಪ; ತೃತೀಯ ಲಿಂಗಿ ವಿರುದ್ಧದ ಮೂರು ಪ್ರಕರಣಗಳ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಸರಗಳ್ಳತನ ಆರೋಪದಲ್ಲಿ ತೃತೀಯ ಲಿಂಗಿಯೊಬ್ಬರ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಿದರೆ, ಸರಗಳ್ಳತನ ಪ್ರಕರಣಗಳಿಗೆ ಅನುಮತಿ ನೀಡಿದಂತಾಗುತ್ತದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಸಿಜೆಎಂ (ಮಂಗಳೂರು) ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಬೆಂಗಳೂರಿನ ವಿವೇಕ್‌ ನಗರದ ನಿವಾಸಿಯಾದ ತೃತೀಯ ಲಿಂಗಿ ಅಭಿಷೇಕ್‌ ಅಲಿಯಾಸ್‌ ಗೊಂಬಿ ಅಲಿಯಾಸ್‌ ಅನಾಮಿಕ ಸಲ್ಲಿಸಿದ್ದ ಮೂರು ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಆರೋಪಿ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಮೂರು ಪ್ರದೇಶಗಳಲ್ಲಿ, ಮೂರು ಸರಗಳನ್ನು ಕಳವು ಮಾಡಿದ ಆರೋಪದಲ್ಲಿ ಮೂವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವಲ್ಲಿ ಮೂರರಿಂದ ಎಂಟು ತಿಂಗಳ ಕಾಲ ವಿಳಂಬವಾಗಿದೆ. ಟಿವಿಯಲ್ಲಿ ಬಂದ ಫ್ಲ್ಯಾಷ್ ನ್ಯೂಸ್‌ ನೋಡಿದ ನಂತರ ದೂರುದಾರರು ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರದ ಪರ ವಕೀಲರು, ಮೊದಲ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಲಾಗಿತ್ತು. ಆತನ ಸ್ವಇಚ್ಛೆ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಅದರಲ್ಲಿ ಇತರ ಎರಡು ಸರಗಳ್ಳನ ಪ್ರಕರಣಗಳ ಬಗ್ಗೆ ಆತನೇ ಹೇಳಿಕೆ ನೀಡಿದ್ದ. ತನಿಖೆ ವೇಳೆ ಕಳವು ಮಾಡಿದ್ದ ಸರಗಳನ್ನು ಜಪ್ತಿ ಮಾಡಲಾಗಿದೆ. ಈ ಮಧ್ಯೆ, ಇತರ ಇಬ್ಬರು ದೂರುದಾರರು ದೂರು ದಾಖಲಿಸಿದ್ದಾರೆ. ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸಿದೆ. ಈ ಹಂತದಲ್ಲಿ ಪ್ರಕರಣ ರದ್ದುಪಡಿಸಬಾರದು ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ವಿಚಾರಣಾ ನ್ಯಾಯಾಲಯದ ವಿಚಾರಣೆ ಎದುರಿಸಲಿ ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:
ಹೆದ್ದಾರಿಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದವರು ಮತ್ತು ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸುತ್ತಿದ್ದವರ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ ಕತ್ತಿನಲ್ಲಿದ್ದ ಸರಗಳನ್ನು ಕದ್ದ ಆರೋಪದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ಅರ್ಜಿದಾರನ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮಂಗಳೂರು 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಸಿಜೆಎಂ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment