ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣ; ವಿಲ್ಸನ್ ಗಾರ್ಡನ್ ನಾಗ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಜಾ
- by Jagan Ramesh
- March 11, 2026
- 64 Views
ಬೆಂಗಳೂರು: ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣ ಸಂಬಂಧ ಜೆ. ನಾಗರಾಜು ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಆರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಜೆ. ನಾಗರಾಜು ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ (ಎ1), ಮೋಹನ ಅಲಿಯಾಸ್ ಡಬಲ್ ಮೀಟರ್ ಮೋಹನ್ (ಎ2), ಎ. ನವೀನ್ ಕುಮಾರ್ (ಎ9), ಗೋಕುಲ್ (ಎ11), ಬಿ. ಸುರೇಶ್ ಬಾಬು (ಎ14) ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ (ಎ16) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.
ಅರ್ಜಿದಾರರ ಪೂರ್ವಾಪರ ಮತ್ತು ಪ್ರಕರಣದಲ್ಲಿನ ಆರೋಪಗಳ ಗಂಭೀರತೆ ಪರಿಶೀಲಿಸಿದಾಗ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಸಾಮರ್ಥ್ಯ ಆರೋಪಿಗಳಿಗೆ ಇದೆ. ಪ್ರಕರಣದಲ್ಲಿ 8 ಮಂದಿ ಪ್ರತ್ಯಕ್ಷದರ್ಶಿಗಳಿದ್ದು, ಅವರನ್ನು ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವುದು ಬಾಕಿಯಿದೆ. ಆರೋಪಿಗಳ ವಿರುದ್ಧದ ಎಲ್ಲ ಆರೋಪಗಳು ಮತ್ತು ಪ್ರಕರಣದ ಗಂಭೀರತೆ, ಸಾಕ್ಷ್ಯಗಳ ಸ್ವರೂಪ ಮತ್ತು ಆರೋಪಿಗಳ ಪೂರ್ವಾಪರ ಪರಿಗಣಿಸಿದಾಗ ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಇದೇ ವೇಳೆ, ವಿಚಾರಣಾ ನ್ಯಾಯಾಲಯ ಸೂಕ್ತ ಸಮಯಕ್ಕೆ ಮುಖ್ಯ ವಿಚಾರಣೆ (ಟ್ರಯಲ್) ಆರಂಭಿಸದಿದ್ದರೆ, ಜಾಮೀನು ಕೋರಿ ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸುವ ಮುಕ್ತ ಅವಕಾಶ ಹೊಂದಿರುತ್ತಾರೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ಆಗಸ್ಟ್ 4ರಂದು ರೌಡಿ ಶೀಟರ್ ಮಹೇಶ್ ಕೊಲೆ ನಡೆದಿತ್ತು. ಘಟನೆ ಕುರಿತು ಮೃತನ ಪತ್ನಿ ಮೇಘನಾ ಈರೇಗೌಡ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ವಿಲ್ಸನ್ ಗಾರ್ಡನ್ ನಾಗ ಸೇರಿ ಅರ್ಜಿದಾರ ಆರೋಪಿಗಳನ್ನು ಆಗಸ್ಟ್ 6 ಹಾಗೂ 18ರಂದು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ಒಟ್ಟು 27 ಮಂದಿ ವಿರುದ್ಧ ಕೊಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದೂ ಸೇರಿದಂತೆ ವಿವಿಧ ಆರೋಪಗಳ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಆರೋಪಿಗಳ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ 2025ರ ಜುಲೈ 11ರಂದು ವಜಾಗೊಳಿಸಿತ್ತು. ಇದರಿಂದ, ಜಾಮೀನು ಕೋರಿ ಅರ್ಜಿದಾರ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.



Comments (0)