ವಕೀಲರಿಗೆ ಠಾಣೆ ಪ್ರವೇಶಿಸಲು ಅನುಮತಿ ನಿರಾಕರಣೆ; ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್‌ರಿಂದ ವಿವರಣೆ ಕೇಳಿದ ಸೆಷನ್ಸ್ ಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿದ ಆರೋಪ ಸಂಬಂಧ ಪರಿಶೀಲನೆಗೆ ಬಂದಿದ್ದ ಆರೋಪಿಯ ಪರ ವಕೀಲರಿಗೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಆವರಣ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ವಿವರಣೆ ನೀಡುವಂತೆ ಠಾಣೆಯ ಇನ್‌ಸ್ಪೆಕ್ಟರ್‌ಗೆ ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಮುಂದುವರಿಸಿತು.

ಪ್ರಕರಣದ 3ನೇ ಆರೋಪಿ ಪವನ್‌ ಪರ ವಕೀಲ ಸುಧನ್ವ ಹಾಜರಾಗಿ, ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿರುವ ಬಗ್ಗೆ ಪರಿಶೀಲನೆ ನಡೆಸಲು ಫೆಬ್ರವರಿ 23ರಂದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹೋಗಿದ್ದೆ. ಆಗ ಠಾಣೆಯ ಆವರಣ ಪ್ರವೇಶಿಸಲು ಪೊಲೀಸರು ನಿರಾಕರಿಸಿದ್ದರು. ಫೆಬ್ರವರಿ 24ರಂದು ಈ ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಅಂದು ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಠಾಣೆ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದ ಘಟನೆ ವಿವರಿಸಿ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯ, ಈ ಪ್ರಮಾಣಪತ್ರವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ಗೆ ಕಳುಹಿಸಿಕೊಡಬೇಕು ಎಂದು ವಕೀಲ ಸುಧನ್ವಗೆ ನಿರ್ದೇಶಿಸಿತಲ್ಲದೆ, ಪ್ರಮಾಣಪತ್ರದಲ್ಲಿನ ಆರೋಪ ಕುರಿತು ವಿವರಣೆ ನೀಡುವಂತೆ ಇನ್‌ಸ್ಪೆಕ್ಟರ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ (ಮಂಗಳವಾರ) ಮುಂದೂಡಿತು.

Related Articles

Comments (0)

Leave a Comment