ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆಯಲ್ಲಿ ವ್ಯಕ್ತಿಗೆ ಬೆಂಕಿ‌ ಹಚ್ಚಿ‌ ಕೊಲೆ; ಪತಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಸಂದೇಹದಲ್ಲಿ ವ್ಯಕ್ತಿಯೊಬ್ಬನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದಿದ್ದ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹಾಗೂ ಶಿಕ್ಷೆ ಪ್ರಮಾಣ ಕಡಿತಗೊಳಿಸುವಂತೆ ಕೋರಿ ಅಪರಾಧಿ ಆಸೀಫ್‌ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಹಾಗೂ ನ್ಯಾಯಮೂರ್ತಿ ವೆಂಕಟೇಶ್‌ ಟಿ. ನಾಯಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಮೇಲ್ಮನವಿದಾರನೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವುದನ್ನು ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ ಹಾಗೂ ಮೃತನು ಸಾಯುವ ಮುನ್ನ ನೀಡಿರುವ ಹೇಳಿಕೆಯಲ್ಲೂ (ಡೈಯಿಂಗ್‌ ಡಿಕ್ಲರೇಷನ್‌) ಅಪರಾಧ ಸಾಬೀತಾಗಿರುವುದರಿಂದ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿದೆ.

ಮೃತನನ್ನು ಕೊಲ್ಲುವ ಉದ್ದೇಶವಿರಲಿಲ್ಲವೆಂಬ ಅಪರಾಧಿಯ ಹೇಳಿಕೆಯನ್ನು ಒಪ್ಪಲಾಗದು. ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಆರೋಪಿಯು ಪೆಟ್ರೋಲ್‌ ಡಬ್ಬ (ಬಾಟಲ್‌), ಬೆಂಕಿ ಪೆಟ್ಟಿಗೆಯೊಂದಿಗೆ ಸ್ಥಳಕ್ಕೆ ಹೋಗಿ, ವ್ಯಕ್ತಿಯ ಮೇಲೆ ಪೆಟ್ರೋಲ್‌ ಸುರಿದು ಮೃತ ಬೆಂಕಿ ಹಚ್ಚಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಮೃತ ವ್ಯಕ್ತಿಯ ಜೀವ ತೆಗೆಯುವ ಉದ್ದೇಶವಿರಲಿಲ್ಲ ಎಂಬ ಮೇಲ್ಮನವಿದಾರನ ಪರ ವಕೀಲರ ವಾದ ಒಪ್ಪಿಕೊಳ್ಳಲಾಗದು. ಆದ್ದರಿಂದ, ಜೀವಾವಧಿ ಶಿಕ್ಷೆ ಮತ್ತು ದಂಡದ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷಗಳು ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಮುಂದುವರಿದು, ಶಿಕ್ಷೆಯ ನೀತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಗಮನಿಸಬೇಕು ಮತ್ತು ಆರೋಪಿಯು ಜೀವಂತವಾಗಿದ್ದ ವ್ಯಕ್ತಿಯ ಜೀವವನ್ನು ತೆಗೆದುಕೊಂಡ ಅಪರಾಧದ ತೀವ್ರತೆಯನ್ನು ಗಮನಿಸಿದ ನಂತರ, ಶಿಕ್ಷೆಯನ್ನು ಕಡಿತಗೊಳಿಸುವಂತೆ ಮೇಲ್ಮನವಿದಾರರ ಮನವಿಯನ್ನೂ ಸಹ ಒಪ್ಪಿಕೊಳ್ಳಲಾಗದು. ಮೃತನ ಮರಣಪೂರ್ವ ಹೇಳಿಕೆಯನ್ನು ತನಿಖಾಧಿಕಾರಿ ಸಂಬಂಧಪಟ್ಟ ವೈದ್ಯರ ಸಮ್ಮುಖದಲ್ಲಿ ದಾಖಲಿಸಿದ್ದಾರೆ. ವೈದ್ಯರ ಸಾಕ್ಷ್ಯವು ಗಾಯಾಳು ಪ್ರಜ್ಞೆ ಹೊಂದಿದ್ದರು ಮತ್ತು ಹೇಳಿಕೆ ನೀಡಲು ಯೋಗ್ಯ ಸ್ಥಿತಿಯಲ್ಲಿದ್ದರೆಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ವಿವರಿಸಿದೆ.

ಮೃತ ವ್ಯಕ್ತಿಗೆ ಶೇ. 40ರಿಂದ 45 ಪ್ರಮಾಣದ ಗಾಯಗಳಾಗಿದ್ದು, ಘಟನೆ ನಡೆದ 4 ದಿನಗಳ ನಂತರ ಅಸುನೀಗಿದ್ದಾರೆಂದು ತಿಳಿದುಬಂದಿದೆ. ಆದ್ದರಿಂದ, ಈ ನ್ಯಾಯಾಲಯವು ಮೃತ ವ್ಯಕ್ತಿ ಸಾಯುವ ಮುನ್ನ ನೀಡಿರುವ ಹೇಳಿಕೆಯನ್ನು ಅವಲಂಬಿಸಬಹುದಾಗಿದ್ದು, ವಿಚಾರಣಾ ನ್ಯಾಯಾಲಯವೂ ಅದನ್ನು ಪರಿಗಣಿಸಿ ಸೂಕ್ತ ಶಿಕ್ಷೆಯನ್ನೇ ವಿಧಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ:
ಆಸಿಫ್ ಪತ್ನಿ ಶಹೀದಾ ಖಾನಂ ಇಂಟಿರಿಯರ್‌ ಡೆಕೋರೇಟರ್‌ ಇಮ್ರಾನ್‌ ಆಲಿ ಜತೆ ಕೆಲಸ ಮಾಡುತ್ತಿದ್ದರು. ಇದರಿಂದ, ಆಸಿಫ್ ತನ್ನ ಪತ್ನಿ ಶಹೀದಾ ಖಾನಂ ಶೀಲವನ್ನು ಶಂಕಿಸುತ್ತಿದ್ದನು. 2019ರ ಅಕ್ಟೋಬರ್ 20ರಂದು ಇಮ್ರಾನ್ ಅಲಿ ನಾಗಾವರ ಮುಖ್ಯರಸ್ತೆಯ ಭಾರತ್‌ ಪೆಟ್ರೋಲ್‌ ಬಂಕ್‌ ಸಮೀಪದ ಟೀ ಅಂಗಡಿ ಬಳಿ ನಿಂತಿದ್ದನು. ಅಲ್ಲಿಗೆ ಪೆಟ್ರೋಲ್‌ ಕ್ಯಾನ್‌‌ನೊಂದಿಗೆ ಬಂದ ಆಸಿಫ್ ಇಮ್ರಾನ್ ಆಲಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದನು. ತೀವ್ರ ಸುಟ್ಟ ಗಾಯಗಳಾಗಿದ್ದ ಇಮ್ರಾನ್‌ ಆಲಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆತ ಬದುಕುಳಿದಿರಲಿಲ್ಲ. ಕಾಡುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ದಾಖಲೆಗಳು, ಪ್ರತ್ಯಕ್ಷದರ್ಶಿ ಹೇಳಿಕೆ, ಮೃತನ ಮರಣಪೂರ್ವ ಹೇಳಿಕೆ ಆಧರಿಸಿ ವಿಚಾರಣಾ ನ್ಯಾಯಾಲಯ 2022ರ ಅಕ್ಟೋಬರ್ 1ರಂದು ಆಸಿಫ್‌ನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು‌ ನೀಡಿತ್ತು.

 

 

Related Articles

Comments (0)

Leave a Comment