ವೀರೇಂದ್ರ ಪಪ್ಪಿ ಜಾಮೀನು ರದ್ದು ಕೋರಿ ಇಡಿ ಅರ್ಜಿ; ಶಾಸಕರಿಗೆ ಹೈಕೋರ್ಟ್ ನೋಟಿಸ್
- by Prashanth Basavapatna
- February 12, 2026
- 17 Views
ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ (ಪಿಎಂಎಲ್) ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಶಾಸಕ ಕೆ.ಸಿ. ವೀರೇಂದ್ರ ಅವರಿಗೆ ಮಂಜೂರಾಗಿರುವ ಜಾಮೀನು ರದ್ದುಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅರ್ಜಿ ಸಂಬಂಧ ವೀರೇಂದ್ರ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದಲ್ಲಿ ವಿರೇಂದ್ರ ಅವರಿಗೆ ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಡಿಸೆಂಬರ್ 30ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಇಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಇಡಿ ಪರ ವಕೀಲರು ಹಾಜರಾಗಿ, ಪ್ರತಿವಾದಿ ವಿರೇಂದ್ರ ಅವರಿಗೆ ವಿಶೇಷ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಲು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿ ವಿರೇಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
2025ರ ಆಗಸ್ಟ್ 22 ಮತ್ತು 23ರಂದು ಇಡಿ ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟೋಕ್, ಮುಂಬೈ ಮತ್ತು ಗೋವಾ ಸೇರಿ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್, ಓಸಿಯನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಸಿಯನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್‌ಲೈನ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು.
ಆ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿ ಅವರು ಹಲವು ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ.ಸಿ. ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್9ಟೆಕ್ನಾಲಜೀಸ್ ಹೆಸರಿನ 3 ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಇಡಿ ಹೇಳಿತ್ತು.
ಶೋಧದ ವೇಳೆ 12 ಕೋಟಿ ರೂ. ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ 4 ವಾಹನಗಳನ್ನು ಪಿಎಂಎಲ್ ಕಾಯ್ದೆ ಅಡಿ ಜಪ್ತಿ ಮಾಡಲಾಗಿತ್ತು. ಇದರ ಜತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್‌ಗಳನ್ನು ಜಪ್ತಿ ಮಾಡಲಾಗಿತ್ತು. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟೋಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. ವೀರೇಂದ್ರ ವಿರುದ್ಧ ಅಕ್ಟೋಬರ್ 18ರಂದು ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ವಿರೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಡಿಸೆಂಬರ್ 30ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.


Comments (0)