ಉದ್ಯಮಿ ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಎಚ್ಎಎಲ್ ಇನ್ಸ್ಪೆಕ್ಟರ್ ಸೂಚಿಸಿದ್ದರು; ಹೈಕೋರ್ಟ್ಗೆ ವೈಶಾಕ್ ಪ್ರಮಾಣಪತ್ರ
- by Jagan Ramesh
- February 11, 2026
- 8 Views
ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣದಲ್ಲಿ ಆರೋಪಿಯಾದ ಬಿ.ಕೆ. ವೈಶಾಕ್ ಮತ್ತು ಆತನ ಸ್ನೇಹಿತೆಯಾದ ಸ್ಯಾಂಡಲ್ವುಡ್ ನಟಿಯನ್ನು ಠಾಣೆಗೆ ಕರೆಸಿ ಅರವಿಂದ್ ಕಾಲು ಹಿಡಿಯುವಂತೆ ವೈಶಾಕ್ಗೆ ಇನ್ಸ್ಪೆಕ್ಟರ್ ಅಜರುದ್ದೀನ್ ಸೂಚಿಸಿದ್ದರು ಎಂದು ವಿವರಿಸಿ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ.
ಪ್ರಕರಣ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು. ಎಚ್ಎಎಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಜರುದ್ದೀನ್ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಬಿ.ಕೆ. ವೈಶಾಕ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವೈಶಾಕ್ ಪರ ವಕೀಲರು ಹಾಜರಾಗಿ, ಅರ್ಜಿದಾರರನ್ನು ಬಿಡುಗಡೆ ಮಾಡಲು ಫೆಬ್ರವರಿ 6ರಂದು ಎಚ್ಎಎಲ್ ಠಾಣೆ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಇನ್ಸ್ಪೆಕ್ಟರ್ ಅಜರುದ್ದೀನ್ ಅವರು ಠಾಣೆಗೆ ಪ್ರಕರಣದಲ್ಲಿ ಹೆಸರಿಸಿರುವ ನಟಿಯನ್ನೂ ಕರೆಸಿದ್ದರು. ಮೇಲಾಗಿ ಅರವಿಂದ್ ರೆಡ್ಡಿ ಕಾಲಿಗೆ ಬೀಳುವಂತೆ ವೈಶಾಕ್ಗೆ ಸೂಚಿಸಿದ್ದರು ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸಿದರು.
ಈ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಮೂರ್ತಿಗಳು, ಪ್ರಕರಣ ಸಂಬಂಧ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬ ಬಗ್ಗೆ ಪರಿಶೀಲಿಸೋಣ ಎಂದು ಮೌಖಿಕವಾಗಿ ನುಡಿದು ಅರ್ಜಿ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.
ಬಿಡುಗಡೆಗೆ ಆದೇಶಿಸಿದ್ದ ಹೈಕೋರ್ಟ್:
ಅರ್ಜಿಯನ್ನು ಫೆಬ್ರವರಿ 6ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪೊಲೀಸರು ಅರ್ಜಿದಾರರನ್ನು 2026ರ ಫೆಬ್ರವರಿ 2ರಂದು ಬಂಧಿಸಿ ಮ್ಯಾಜಿಸ್ಟೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಅರ್ಜಿದಾರರನ್ನು ಪೊಲೀಸರ ವಶಕ್ಕೆ ನೀಡಿ ಫೆಬ್ರವರಿ 2ರಂದು ನಗರದ 29ನೇ ಎಸಿಜೆಎಂ ಕೋರ್ಟ್ ಆದೇಶಿಸಿತ್ತು. ಆದರೆ, ಫೆಬ್ರವರಿ 3ರಂದು ಆದೇಶಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದಾರೆ. ಈ ಕಾನೂನುಬಾಹಿರ ಆದೇಶವೊಂದನ್ನೇ ಆಧರಿಸಿ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿ, ಅರ್ಜಿದಾರನ್ನು ಬಿಡುಗಡೆ ಮಾಡಲು ಆದೇಶಿಸಬಹುದಾಗಿದೆ. ಅದರಂತೆ, ಕೂಡಲೇ ಪೊಲೀಸ್ ವಶದಿಂದ ಅರ್ಜಿದಾರರನ್ನು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 11ಕ್ಕೆ ಮುಂದೂಡಿತ್ತು.
ಪ್ರಕರಣವೇನು?
ಉದ್ಯಮಿ ಅರವಿಂದ್ ರೆಡ್ಡಿಗೆ ಜನವರಿಯಲ್ಲಿ ಆರೋಪಿ ವೈಶಾಕ್ ಕೊರಿಯರ್ ಮೂಲಕ ಬೆದರಿಕೆ ಪತ್ರ ಕಳುಹಿಸಿ, ನಟಿಯ ಜತೆಗೆ ಇರುವ ಜಗಳವನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನನ್ನ ಗ್ಯಾರೇಜ್ಗೆ 6ರಿಂದ 7 ಕೋಟಿ ರೂ. ಹಣ ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಅರವಿಂದ ರೆಡ್ಡಿ ನೀಡಿದ್ದ ದೂರಿನ ಆಧಾರದಲ್ಲಿ ಎಚ್ಎಎಲ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ, ನಟಿಯ ಮನೆಯಲ್ಲಿಯೇ ಫೆಬ್ರವರಿ 2ರಂದು ವೈಶಾಕ್ನನ್ನು ಬಂಧಿಸಿದ್ದರು. ಇದರಿಂದ, ಎಫ್ಐಆರ್ ರದ್ದು ಕೋರಿ ವೈಶಾಕ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಇನ್ಸ್ಪೆಕ್ಟರ್ ಅಜರುದ್ದೀನ್ ಹಾಗೂ ಅರವಿಂದ್ ರೆಡ್ಡಿ ಅವರನ್ನು ಪ್ರತಿವಾದಿ ಮಾಡಿದ್ದಾರೆ.
Related Articles
Thank you for your comment. It is awaiting moderation.


Comments (0)