ಮಸಾಜ್ ಪಾರ್ಲರ್‌ನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಪ್ರಕರಣ‌ ರದ್ದು

ಬೆಂಗಳೂರು: ಮೈಸೂರಿನ ಮಸಾಜ್ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಬಾಡಿ ಮಸಾಜ್ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಟರಾದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಮೈಸೂರಿನ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿರುವ ಎಫ್‌ಐಆರ್‌ ಹಾಗೂ ಮೈಸೂರಿನ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಸಾಧುಕೋಕಿಲ ಹಾಗೂ ಮಂಡ್ಯ ರಮೇಶ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪುರಸ್ಕರಿಸಿದೆ.

ಹೈಕೋರ್ಟ್ ಆದೇಶವೇನು?
ಅರ್ಜಿದಾರರ ವಿರುದ್ಧ ವಿಚಾರಣೆ ನಡೆಸಲು ಮೇಲ್ನೋಟಕ್ಕೆ ಯಾವುದೇ ದಾಖಲೆಗಳು ಇಲ್ಲ. ಆಧಾರರಹಿತ ಮತ್ತು ಕ್ಷುಲ್ಲಕ ಆರೋಪಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂಥ ಸಂದರ್ಭದಲ್ಲಿ ಕ್ರಿಮಿನಲ್‌ ಪ್ರಕ್ರಿಯೆಗೆ ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದಿರುವ ನ್ಯಾಯಪೀಠ, ಅರ್ಜಿ ಪುರಸ್ಕರಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ಮುಂದುವರಿಸಲು ಪ್ರಾಸಿಕ್ಯೂಷನ್‌ ಬಳಿ ಸೂಕ್ತ ಸಾಕ್ಷಿಗಳು ಇರಬೇಕು. ಇಲ್ಲಿ ಅದ್ಯಾವುದೂ ಇಲ್ಲ. ಕೃತ್ಯ ನಡೆದ ಸ್ಥಳದ ಮಹಜರ್‌ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಸ್ಥಳದಲ್ಲೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಹೇಳಲಾಗಿದೆ. ಇದೊಂದು ಗಂಭೀರ ವಿರೋಧಭಾಸವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಸಲೂನ್‌ಗೆ ಬಂದಿದ್ದು, ಸಂತ್ರಸ್ತೆ ಅವರಿಗೆ ಮಸಾಜ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವಾಗುವುದಿಲ್ಲ. ಆರೋಪವು ಆಧಾರರಹಿತವಾಗಿದ್ದು, ದಿನಾಂಕ, ಸ್ಥಳ ಮತ್ತು ಕೃತ್ಯ ನಡೆದ ವಿವರ ಇಲ್ಲ. ಮೊದಲನೇ ಆರೋಪಿಯ ವಿರುದ್ಧದ ಆರೋಪವು ಗಂಭೀರವಾಗಿದೆ. ಆದರೆ, ಅರ್ಜಿದಾರರು ಪಾರ್ಲರ್‌ಗೆ ಬಂದಿದ್ದು, ಅವರಿಗೂ ಮಸಾಜ್‌ ಮಾಡಲಾಗಿದೆ ಎಂಬುದನ್ನು ಹೊರತುಪಡಿಸಿ ಬೇರಾವುದೇ ಆರೋಪವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 354ಎ(1)(i) ಮತ್ತು (ii) (ಮಹಿಳೆಗೆ ಲೈಂಗಿಕ ಕಿರುಕುಳ) ಅಡಿಯಲ್ಲಿ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿದೆ. ತನಿಖಾಧಿಕಾರಿಗಳು ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದು, ಅರ್ಜಿದಾರರು ಪಾರ್ಲರ್‌ಗೆ ಬಂದಿಲ್ಲ ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?
ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಅನುಮಾನದ ಮೇರೆಗೆ 2017ರ ಡಿಸೆಂಬರ್ 20ರಂದು ಮೈಸೂರಿನ ಸ್ವಾಮಿ ಆರ್ಕೇಡ್ ಕಟ್ಟಡದಲ್ಲಿದ್ದ ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್ ಮೇಲೆ ಸರಸ್ವತಿಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಮಾಲೀಕ ರಾಜೇಶ್ ಇದ್ದರು. ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಸಲೂನ್‌ಗೆ ಭೇಟಿ ನೀಡುವ ಗ್ರಾಹಕರ ಹೇಳಿದಂತೆ ಕೇಳಬೇಕು, ಅವರ ದೇಹದ ಎಲ್ಲ ಭಾಗಗಳಿಗೂ ಮಸಾಜ್ ಮಾಡುವಂತೆ ಸಲೂನ್ ಮಾಲೀಕ ರಾಜೇಶ್ ಹೇಳಿದ್ದರು. ನಟರಾದ ಸಾಧುಕೋಕಿಲ, ಮಂಡ್ಯ ರಮೇಶ್ ಸಹ ಸಲೂನ್‌ಗೆ ಬರುತ್ತಿದ್ದರು. ಅವರ ದೇಹದ ಎಲ್ಲ ಭಾಗಗಳು ಹಾಗೂ ಗುಪ್ತಾಂಗಕ್ಕೂ ಮಸಾಜ್ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ನಟರಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 354ಎ 1(i)(ii) ಅಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಸಾಧುಕೋಕಿಲ ಹಾಗೂ ಮಂಡ್ಯ ರಮೇಶ್ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.

Related Articles

Comments (0)

Leave a Comment