ಡಿ‌.ಕೆ. ಶಿವಕುಮಾರ್ ಉಚ್ಛಾಟನೆ ಕುರಿತು ಟ್ವೀಟ್; ಜೆಡಿಎಸ್ ಎಕ್ಸ್ ಖಾತೆ ನಿರ್ವಾಹಕರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಕಿತ್ತು ಹಾಕಲಾಗಿದೆ ಎಂದು ರಾಜಕೀಯ ವಿಡಂಬನಾತ್ಮಕ ಟ್ವೀಟ್‌ ಮಾಡಿದ ಆರೋಪದಲ್ಲಿ ಜೆಡಿಎಸ್‌‌ನ ಟ್ವಿಟರ್ (ಎಕ್ಸ್) ಖಾತೆಯ ನಿರ್ವಾಹಕರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎಚ್.ಎಸ್. ಚಂದನ್‌ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ‌ ಮಧ್ಯಂತರ ಆದೇಶ ಮಾಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿ, ಡಿ.ಕೆ. ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ನಿಂದ ಕಿತ್ತು ಹಾಕಲಾಗಿದೆ ಎಂದು ಟ್ವೀಟ್‌ ಮಾಡಲಾಗಿತ್ತು. ತಕ್ಷಣ ಅದನ್ನು ಸರಿಪಡಿಸಲಾಗಿದೆ. ಮುಂದೆ ನಡೆಯಬಹುದಾದ, ಆದರೆ ನಡೆಯದ ಅಪರಾಧಕ್ಕೆ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ರಾಜಕೀಯ ವಿಡಂಬನೆಯಷ್ಟೇ. ನಡೆಯೇಕಿತ್ತು, ಅದು ನಡೆಯಲಿಲ್ಲ. ಜಸ್ಟ್‌ ಮಿಸ್‌ ಎಂಬುದು ಟ್ವೀಟ್ ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಟ್ವೀಟ್‌ ಮಾಡಿದ ತಕ್ಷಣ ಅದನ್ನು ಸರಿಪಡಿಸಲಾಗಿದೆ. ಅರ್ಜಿದಾರರ ವಿರುದ್ಧ ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ಮಧ್ಯಂತರ ಆದೇಶ ಮಾಡಿತಲ್ಲದೆ, ಅರ್ಜಿ ಸಂಬಂಧ ಸರ್ಕಾರ (ಹೈಗ್ರೌಂಡ್ ಠಾಣೆ ಪೊಲೀಸರು) ಹಾಗೂ ದೂರುದಾರರಾದ ಸಿ.ಎಂ. ಧನಂಜಯ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಇತ್ತೀಚೆಗೆ ವಿಧಾನಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ ಗೀತೆ “ನಮಸ್ತೆ ಸದಾ ವತ್ಸಲೇ..” ಹಾಡಿದ್ದರು. ಈ ಹಿನ್ನೆಲೆಯಲ್ಲಿ “ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ನಕಲಿ ಲೆಟರ್‌ಹೆಡ್‌ನಲ್ಲಿ ಶಿಸ್ತು ಸಮಿತಿಯ ಶಿಫಾರಸಿನನ ಮೇರೆಗೆ ಎಐಸಿಸಿ ಒಪ್ಪಿಗೆಗೆ ಒಳಪಟ್ಟು ಶಿವಕುಮಾರ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ” ಎಂದು ಜೆಡಿಎಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ. ಈ ಮೂಲಕ‌ ಶಿವಕುಮಾರ್ ಅವರ ಮರ್ಯಾದೆಗೆ ಧಕ್ಕೆ ತರಲಾಗಿದ್ದು, ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ 2025ರ ಆಗಸ್ಟ್ 26ರಂದು ದೂರು ನೀಡಿದ್ದರು.

ಈ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 353(1)ಬಿ ಮತ್ತು 353 (2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಸಿ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಎಚ್.ಎಸ್. ಚಂದನ್, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment