ಬಿಕ್ಲು ಶಿವು ಕೊಲೆ ಪ್ರಕರಣ; ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- February 10, 2026
- 10 Views
ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ನಿರೀಕ್ಷಣಾ ಜಾಮೀನು ಕೋರಿ ಪ್ರಕರಣದ 5ನೇ ಆರೋಪಿ ಬಿ.ಎ. ಬಸವರಾಜ ಅಲಿಯಾಸ್ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.
ಹೆಚ್ಚಿನ ತನಿಖೆ ಒಳಗಾಗಲು ಅರ್ಜಿದಾರರು ಸಿದ್ಧರಾಗಿದ್ಧಾರೆ. ಇದರಿಂದ, ನಿಗದಿತ ಅವಧಿಗೆ ಮಾತ್ರ ತಮ್ಮನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬಹುದು ಎಂಬ ಬೈರತಿ ಬಸವರಾಜ್ ಅವರ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇದೇ ವೇಳೆ, 2025ರ ಡಿಸೆಂಬರ್ 26ರಂದು ಹೈಕೋರ್ಟ್‌ನ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಜೂರು ಮಾಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನೂ ತೆರವುಗೊಳಿಸಲಾಗಿದೆ.
ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿರುವ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ.
ತೀರ್ಪಿನ ಪ್ರಮುಖಾಂಶ:
• ತನಿಖಾ ದಾಖಲೆಗಳು, ಫೋಟೋ ಮತ್ತು ಸಿಡಿಆರ್‌ಗಳನ್ನು ಪರಿಶೀಲಿಸಿದಾಗ, ಅರ್ಜಿದಾರರು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾಗಿ ತಿಳಿದುಬರುತ್ತದೆ.
• ಸಿಡಿಆರ್, ತನಿಖಾ ವರದಿ ಮತ್ತು ಇತರ ಆರೋಪಿಗಳೊಂದಿಗೆ ಅರ್ಜಿದಾರರು ಇರುವ ಪೋಟೋಗಳನ್ನು ಆರೋಪಿಯ ಎದುರಿಗಿಟ್ಟು ತನಿಖೆ ನಡೆಸಬೇಕಿದ್ದು, ತನಿಖಾ ದಾಖಲೆಗಳ ಕುರಿತು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಾದ ಮತ್ತು ಆ ಕುರಿತು ಅರ್ಜಿದಾರರು ವಿವರಣೆ ನೀಡಬೇಕಾದ ಅವಶ್ಯಕತೆ ಇದೆ.
• ವಿಚಾರಣೆಯ ಕುರಿತು ಅಥವಾ ಹೇಗೆ ವಿಚಾರಣೆ ಮಾಡಬೇಕೆಂಬುದನ್ನು ಅರ್ಜಿದಾರರು ನಿರ್ದೇಶಿಸಲು ಸಾಧ್ಯವಿಲ್ಲ. ಆದ್ದರಿಂದ, ಬೈರತಿ ಬಸರಾಜ್ ಅವರ ಕಸ್ಟೋಡಿಯಲ್ (ವಶಕ್ಕೆ ಪಡೆದು) ವಿಚಾರಣೆ ನಡೆಸಬೇಕು ಎಂಬ ತನಿಖಾಧಿಕಾರಿಗಳ ಮನವಿ ತಳ್ಳಿಹಾಕಲಾಗದು.
• ನಿರೀಕ್ಷಣಾ ಜಾಮೀನಿನ ಮೇಲೆ ಪ್ರಭಾವಿಯಾಗಿರುವ ಅರ್ಜಿದಾರ ಆರೋಪಿಯ ವಿಚಾರಣೆಯು ಅಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ಯಾವ ವಿಧಾನದಲ್ಲಿ ತನಿಖೆ ನಡೆಸಬೇಕು ಎಂಬ ನಿರ್ಧಾರವನ್ನು ತನಿಖಾ ಪ್ರಾಧಿಕಾರಕ್ಕೆ ಬಿಡಬೇಕು. ಅದರ ಬಗ್ಗೆ ನ್ಯಾಯಾಲಯ ತೀರ್ಪಿನಲ್ಲಿ ಹೇಳಲು ಸಾಧ್ಯವಿಲ್ಲ.
• ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಮೃತರ ನಡುವೆ ಈ ಹಿಂದೆಯೇ ದ್ವೇಷವಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಅರ್ಜಿದಾರರು, ಪ್ರಕರಣದ ಮೊದಲನೆ ಆರೋಪಿ ಜಗದೀಶ್ ಜವಾಬ್ದಾರರಾಗುತ್ತಾರೆ ಎಂದು ಲಿಖಿತವಾಗಿ ಮೃತ ಶಿವು ಹಿಂದೆಯೇ ದೂರು ನೀಡಿದ್ದರು. ಇದರಿಂದ, ಶಿವುಗೆ ಜೀವ ಭಯವಿತ್ತು ಎಂಬುದು ದೃಢಪಡುತ್ತದೆ.
• ಬೈರತಿ ಬಸವರಾಜ್ ಅವರ ವಿಧಾಸಭಾ ಕ್ಷೇತ್ರದಲ್ಲಿಯೇ ಮೃತ ಶಿವಕುಮಾರ್ ತಾಯಿ ವಾಸವಿದ್ದಾರೆ. ಬಸರಾಜ್ ರಾಜಕೀಯ ಅಧಿಕಾರವನ್ನು ಹೊಂದಿದ್ದಾರೆ. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದರೆ, ಅದು ತನಿಖೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಕಳವಳ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:
ಜಮೀನು ವ್ಯಾಜ್ಯದ ಸಂಬಂಧ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು 2025ರ ಜುಲೈ 15ರಂದು ಬಿಕ್ಲು ಶಿವ ಕೊಲೆ ನಡೆದಿತ್ತು. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜ್ 5ನೇ ಆರೋಪಿಯಾಗಿದ್ದಾರೆ. ಮೊದಲಿಗೆ ಎಫ್‌ಐಆರ್ ರದ್ದು ಕೋರಿ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖಾಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ಬಂಧಿಸಬಾರದು. ಬಸವರಾಜ್ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿತ್ತು. ಅದರಂತೆ ಬಸವರಾಜ್ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
ನಂತರ 2025ರ ಆಗಸ್ಟ್ 12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೊಕಾ ಕಾಯ್ದೆ ಹೇರಿದ್ದರು. ಈ ಕ್ರಮ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಕೋರಿ ಬಸವರಾಜ್ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೊಕಾ ಅನ್ವಯಿಸಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿತ್ತಾದರೂ, ನಿರೀಕ್ಷಣಾ ಜಾಮೀನು ಅರ್ಜಿ ನಿರಾಕರಿಸಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಬಸವರಾಜ್ ಅವರಿಗೆ ಸೂಚಿಸಿತ್ತು.
ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಬಸವರಾಜ್ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಡಿಸೆಂಬರ್ ವಜಾಗೊಳಿಸಿತ್ತು. ಇದರಿಂದ, ನಿರೀಕ್ಷಣಾ ಜಾಮೀನು ಕೋರಿ ಬಸವರಾಜ್ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2025ರ ಡಿಸೆಂಬರ್ 26ರಂದು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಬೈರತಿ ಬಸವರಾಜ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
Related Articles
Thank you for your comment. It is awaiting moderation.


Comments (0)