ವಾಲ್ಮೀಕಿ ನಿಗಮ ಹಗರಣ; ಬಿ. ನಾಗೇಂದ್ರ ನಿರೀಕ್ಷಣಾ ಜಾಮೀನು ರದ್ದು ಕೋರಿದ ಅರ್ಜಿ ಗುರುವಾರಕ್ಕೆ ಮುಂದೂಡಿದ ಹೈಕೋರ್ಟ್
- by Jagan Ramesh
- February 4, 2026
- 5 Views
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಇದೇ ವೇಳೆ, ಪ್ರಕರಣ ಸಂಬಂಧ ಬಿ. ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ವಿರುದ್ಧ ಗುರುವಾರದವರೆಗೆ ಬಲವಂತದ ಕ್ರಮ ಜರುಗಿಸದಂತೆ ಸಿಬಿಐಗೆ ಸೂಚಿಸಿದೆ.
ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತ್ತೊಂದೆಡೆ, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನೆಕ್ಕಂಟಿ ನಾಗರಾಜ್ ಸಹ ಅರ್ಜಿ ಸಲ್ಲಿಸಿದ್ದಾರೆ.
ಎರಡೂ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೆಲ ಕಾಲ ಅರ್ಜಿಗಳ ಕುರಿತು ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಜತೆಗೆ, ಬಂಧನ ಭೀತಿ ಇರುವ ಹಿನ್ನೆಲೆಯಲ್ಲಿ ಗುರುವಾರದವರೆಗೆ ನೆಕ್ಕಂಟಿ ನಾಗರಾಜ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸಿಬಿಐಗೆ ಸೂಚಿಸಿದ ನ್ಯಾಯಪೀಠ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಒಡ್ಡದಂತೆ ನೆಕ್ಕಂಟಿ ನಾಗರಾಜ್‌ಗೆ ತಾಕೀತು ಮಾಡಿತು.
Related Articles
Thank you for your comment. It is awaiting moderation.


Comments (0)