ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಕೆ‌ಎಸ್‌ಎಲ್‌ಯು‌ಗೆ ಒಂದು ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ ‘ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ’ ರಚಿಸಲು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಒಂದು ವಾರ ಗಡುವು ನೀಡಿದೆ.

ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ನಿರ್ದೇಶನ ಕೋರಿ ಕಾನೂನು ವಿದ್ಯಾರ್ಥಿ ಕೆ.ಎನ್. ಪ್ರಣವ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಬೆಳಗಿನ ಕಲಾಪದ ವೇಳೆ ಕೆಎಸ್‌ಎಲ್‌ಯು ಪರ ವಕೀಲರು ಹಾಜರಾಗಿ, ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚನೆ ಬಗ್ಗೆ ಅರ್ಜಿದಾರರು ಕೇಳಿದ್ದಾರೆ ಎಂದರು. ಹೌದು, ಸಮಿತಿಗಳನ್ನು ರಚಿಸಲಾಗಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ವಕೀಲರು, ಮಾಹಿತಿ ಪಡೆದು ತಿಳಿಸಲು ಕಾಲಾವಕಾಶ ಕೋರಿದರು. ಅದರಂತೆ ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಮಧ್ಯಾಹ್ನ ಮತ್ತೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಕೆಎಸ್‌ಎಲ್‌ಯು ಪರ ವಕೀಲರು 2024ರ ಅಧಿಸೂಚನೆಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಕೆಎಸ್‌ಎಲ್‌ಯು ಹಾಜರುಪಡಿಸಿರುವುದು ವಿದ್ಯಾರ್ಥಿಗಳ ಕಲ್ಯಾಣ ಸಮಿತಿಗೆ ಸಂಬಂಧಿಸಿದ ಅಧಿಸೂಚನೆಯಾಗಿದೆ. ಯುಜಿಸಿ ನಿರ್ದೇಶನ ಪ್ರಕಾರ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲು ಮನವಿ ಮಾಡಲಾಗಿದೆ ಎಂದರು.

ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು ಹಳೆಯ ಅಧಿಸೂಚನೆ ಹಾಜರುಪಡಿಸಿರುವುದಕ್ಕೆ ಅಸಮಧಾನಗೊಂಡ ನ್ಯಾಯಪೀಠ, ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದೀರಾ? ರಿಜಿಸ್ಟ್ರಾರ್ ಅವರನ್ನು ಕೋರ್ಟ್‌ಗೆ ಕರೆಸಬೇಕಾಗುತ್ತದೆ. ರಿಜಿಸ್ಟ್ರಾರ್ ಅವರ ಈ ನಡವಳಿಕೆ ದಾಖಲಿಸಬೇಕಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು. ಮತ್ತೆ ಸಮಯ ಕೇಳಿದ ವಕೀಲರು, ಸಂಜೆ ವೇಳೆಗೆ ಹಾಜರಾಗಿ, ಯುಜಿಸಿ ನಿರ್ದೇಶನದ ಪ್ರಕಾರ ಸಮಿತಿ ರಚಿಸಲಾಗಿಲ್ಲ, ಅದಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೋರಿದರು.

ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲಾಗಿಲ್ಲ ಎಂದರೆ ಏನರ್ಥ. ಒಂದು ವಾರದಲ್ಲಿ ಸಮಿತಿಗಳನ್ನು ರಚಿಸಬೇಕು, ಮತ್ತೆ ಸಮಯ ಕೊಡಲ್ಲ. ಇಲ್ಲವಾದರೆ, ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.

ಮನವಿ ಏನು?
ವಿಶ್ವವಿದ್ಯಾಲಯ ಅನುದಾನ ಆಯೋಗ (ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ನಿಯಮಗಳು) 2023ರ ಪ್ರಕಾರ ಪ್ರತಿ ಕಾನೂನು ವಿವಿ ಹಾಗೂ ಕಾಲೇಜುಗಳಲ್ಲಿ ಕುಂದುಕೊರತೆ ಪರಿಹಾರ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಿ ಅದಕ್ಕೆ ಒಂಬಡ್ಸಮನ್ ನೇಮಕ ಮಾಡಬೇಕು. ಆದರೆ, ಕೆಎಸ್‌ಎಲ್‌ಯು ಹಾಗೂ ರಾಜ್ಯಾದ್ಯಂತ ಅದರ ಅಧೀನದ ಕಾಲೇಜು ಮತ್ತು ಸಂಸ್ಥೆಗಳಲ್ಲಿ ಈ ಸಮಿತಿಗಳನ್ನು ರಚಿಸಲಾಗಿಲ್ಲ. ಈ ಬಗ್ಗೆ ಕಾನೂನು ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್ ಹಾಗೂ ಯುಜಿಸಿ ಅಧ್ಯಕ್ಷರಿಗೆ 2025ರ ನವೆಂಬರ್ 8 ಮತ್ತು ಡಿಸೆಂಬರ್ 8ರಂದು ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment