ಪ್ರೊ. ನಿರಂಜನ ವಿರುದ್ಧದ ತನಿಖೆ ಆದೇಶ ರದ್ದು; ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣ ಹಿಂದಿರುಗಿಸಿದ ಹೈಕೋರ್ಟ್

ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ. ನಿರಂಜನ ಅವರ ವಿರುದ್ಧದ ಮಾನನಷ್ಟ ಪ್ರಕರಣವನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.

ಕೋಲಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶ ಮತ್ತು ಗುಲ್‌ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಪ್ರೊ. ನಿರಂಜನ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ (ಕಾಗ್ನೈಜೆನ್ಸ್‌ ತೆಗೆದುಕೊಳ್ಳುವ) ಮುನ್ನ ಅರ್ಜಿದಾರರಿಗೆ ವಿವರಣೆ ನೀಡಲು ಸೂಕ್ತ ಅವಕಾಶ ಕಲ್ಪಿಸಿಲ್ಲ. ಇದು ಕಾನೂನಾತ್ಮಕ ತೊಡಕಾಗಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ ಪ್ರಕರಣವನ್ನು ಹಿಂದಿರುಗಿಸಲಾಗುತ್ತಿದೆ. ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ತೀರ್ಮಾನಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣವೇನು?
ಅರ್ಜಿದಾರರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ದೂರುದಾರ ಆರ್. ಮಂಜುನಾಥ್‌ ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದರು. ಕೆಲ ಆರೋಪ ಕೇಳಿ ಬಂದ ಕಾರಣ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಂಜುನಾಥ್‌ ಅನ್ನು ಸೇವೆಯಿಂದ ತೆಗೆದುಹಾಕಿತ್ತು. ಅದನ್ನು ಪ್ರಶ್ನಿಸಿ ಮಂಜುನಾಥ್‌ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಸೇವೆಯಿಂದ ಮಂಜುನಾಥ್‌ ಅವರನ್ನು ತೆಗೆದುಹಾಕಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌, ಪ್ರಕರಣವನ್ನು ವಿಶ್ವವಿದ್ಯಾಲಯಕ್ಕೆ ಹಿಂದುಗಿಸಿತ್ತು.

ಮಂಜುನಾಥ್ ವಿರುದ್ದದ ಆರೋಪಗಳ ಕುರಿತು ಕಾನೂನು ಪ್ರಕಾರ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ವಿವರಣೆ ನೀಡಲು ಮಂಜುನಾಥ್‌ಗೆ ಅವಕಾಶ ನೀಡಿ, ನಂತರ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು. ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಮಂಜುನಾಥ್‌ ಅವರು ನಿರಂಜನ ವಿರುದ್ಧ ಮಾನನಷ್ಟ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆ ಮತ್ತು ಮಾನನಷ್ಟ ಅಪರಾಧದಡಿ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸುವಂತೆ ಗುಲ್‌ಪೇಟೆ ಠಾಣೆ ಪೊಲೀಸರಿಗೆ 2025ರ ಜೂನ್ 4ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು.

ಅದರಂತೆ, ಜೂನ್ 6ರಂದು ಪೊಲೀಸರು, ನಿರಂಜನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ 3(1) (ಯು) ಮತ್ತು (ಕ್ಯೂ) ಅಡಿಯಲ್ಲಿ ಸಾರ್ವಜನಿಕ ಸೇವಕನಿಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವ್ಯಕ್ತಿ ಬಗ್ಗೆ ಸುಳ್ಳು ಮಾಹಿತಿ ನೀಡಿ ಹಾನಿ/ಕಿರುಕುಳ ನೀಡಿದ, ಲಿಖಿತ, ಮೌಖಿಕ ಅಥವಾ ಸಂಜ್ಞೆ ಮೂಲಕ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ವ್ಯಕ್ತಿಯ ವಿರುದ್ಧ ದ್ವೇಷ ಭಾವನೆ ಉತ್ತೇಜಿಸಿದ ಮತ್ತು ಐಪಿಸಿ ಸೆಕ್ಷನ್ 356 (2) ಅಡಿಯಲ್ಲಿ ಮಾನನಷ್ಟ ಉಂಟು ಮಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದರಿಂದ, ನಿರಂಜನ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment