ಅಕ್ರಮ ವಿದೇಶಿಯರಿಂದ ರಾಷ್ಟ್ರದ ಭದ್ರತೆಗೆ ಅಪಾಯ; ಹೈಕೋರ್ಟ್ ಕಳವಳ

ಬೆಂಗಳೂರು: ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್‌ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದ್ದು, ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್‌ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್‌ ಐವೊಬಾ ಹಾಗೂ ವುಡೆರಿಕ್‌ ಫಿಡೆಲಿಸ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಆರ್‌ಒ) ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿರುವ ಕುರಿತ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಷಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಎಫ್‌ಆರ್‌ಆರ್‌ಒ ಪರ ಹಾಜರಾಗಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಅವರು, ಅರ್ಜಿದಾರರು 2015ರಲ್ಲಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಬಂದಿದ್ದಾರೆ ಮತ್ತು ವಿಭಿನ್ನ ವೀಸಾಗಳಲ್ಲಿ ಉಳಿದುಕೊಂಡಿದ್ದಾರೆ. ಇಮೆಕಾ ಜೇಮ್ಸ್‌, ಸೋಗು ಹಾಕಿಕೊಂಡು ಮತ್ತೊಬ್ಬರ ಹೆಸರಿನಲ್ಲಿ ಅನುಮತಿಸಲಾದ ವೀಸಾ ಹೊಂದಿ ಗಡುವನ್ನು ಮೀರಿ ನಗರದಲ್ಲಿ ಉಳಿದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ಅರ್ಜಿದಾರರ ವಿರುದ್ಧ ಈಗಾಗಲೇ ಮಾದಕ ದ್ರವ್ಯ ನಿಗ್ರಹ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪವಿದೆ. ಆದರೆ, ಅವರು ಭಾರತದ ಸಂವಿಧಾನದ ಅಡಿಯಲ್ಲಿ ನೈಜೀರಿಯನ್ ಪ್ರಜೆಗಳಾಗಿ ತಮ್ಮ ಹಕ್ಕು ಉಲ್ಲಂಘನೆಯಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.

ಅರ್ಜಿದಾರರು ಮಾತ್ರವಲ್ಲದೆ ಸಾಕಷ್ಟು ವಿದೇಶಿಯರು ಅಧಿಕೃತ ವೀಸಾ ಇಲ್ಲದೆ ನಗರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ತನಿಖೆಗೆ ಅಗತ್ಯವಿರುವ ಅವಧಿಯನ್ನು ಮೀರಿದ್ದಾರೆ. ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ನಿಯಮಗಳ ಪ್ರಕಾರ, ದೇಶದೊಳಗೆ ಪ್ರವೇಶಿಸುವ ವಿದೇಶಿ ಪ್ರಜೆ 14 ದಿನಗಳ ಒಳಗಾಗಿ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೆ, ಈ ಅರ್ಜಿದಾರರು ಇಂದಿಗೂ ತಮ್ಮನ್ನು ನೋಂದಣಿ ಮಾಡಿಸಿಕೊಂಡಿಲ್ಲ. ಎಫ್ಆರ್‌ಆರ್‌ಒ ನೋಂದಣಿ ಇಲ್ಲದೆ ನಗರದಲ್ಲಿ ಉಳಿದುಕೊಂಡಿರುವ ಈ ವಿದೇಶಿ ಪ್ರಜೆಗಳನ್ನು ನಿಭಾಯಿಸುವಲ್ಲಿ ರಾಜ್ಯದ ಕಡೆಯಿಂದಲೂ ಕರ್ತವ್ಯ ಲೋಪವಾಗಿದೆ ಎಂದರು.

Related Articles

Comments (0)

Leave a Comment