ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂಸ್ವಾಧೀನ ಎತ್ತಿ ಹಿಡಿದ ಹೈಕೋರ್ಟ್
- by Jagan Ramesh
- January 31, 2026
- 19 Views
ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್‌ಗೆ ಸೇರಿದ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ‘ಮೆಗಾ ಮಾರ್ಕೆಟ್’ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಯಶವಂತಪುರದ ಶ್ರೀಗಂಧದ ಕಾವಲು ಪ್ರದೇಶದಲ್ಲಿನ ಅಂದಾಜು 172 ಎಕರೆ ಮತ್ತು ಹೇರೋಹಳ್ಳಿ ಗ್ರಾಮದಲ್ಲಿ 100 ಎಕರೆ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಹೆಸರಿನಲ್ಲಿತ್ತು. ಮೆಗಾ ಮಾರ್ಕೆಟ್ ಸ್ಥಾಪನೆಗಾಗಿ ಶ್ರೀಗಂಧದ ಕಾವಲಿನಲ್ಲಿನ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು 1994ರಲ್ಲಿ ಮತ್ತು ಹೇರೋಹಳ್ಳಿಯ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 1999ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು.
ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸಹ ತಿರಸ್ಕರಿಸಿದ್ದು, ಏಕಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ಯಾವುದೇ ಲೋಪಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಆದೇಶವೇನು?
ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಟ್ರಸ್ಟ್ ಕಾಲಕಾಲಕ್ಕೆ ವಿವಿಧ ನ್ಯಾಯಾಲಯಗಳಿಂದ ಪಡೆದ ತಡೆಯಾಜ್ಞೆಗಳೇ ಪ್ರಮುಖ ಕಾರಣ. ಕಾನೂನುಬದ್ಧ ಕಾಲಮಿತಿಯಲ್ಲೇ ಪ್ರಕ್ರಿಯೆ ನಡೆದಿದೆ. ಮಾರುಕಟ್ಟೆ ಯೋಜನೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಸರ್ಕಾರ ‘ತುರ್ತು ಕಲಮು’ ಬಳಕೆ ಕಾನೂನು ಬದ್ಧವಾಗಿದೆ. ಟ್ರಸ್ಟ್ ಈಗಾಗಲೇ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಭೆಗಳಲ್ಲಿ ಭಾಗವಹಿಸಿತ್ತು ಮತ್ತು ಸುಮಾರು 2.36 ಕೋಟಿ ರೂಪಾಯಿಗಳ ಪರಿಹಾರವನ್ನೂ ಪಡೆದುಕೊಂಡಿದೆ. ಹಣ ಪಡೆದ ಹತ್ತು ವರ್ಷಗಳ ನಂತರ ಅದನ್ನು ಹಿಂದಿರುಗಿಸಲು ಪ್ರಯತ್ನಿಸಿ ಭೂಸ್ವಾಧೀನವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಟ್ರಸ್ಟ್ ಹೆಚ್ಚುವರಿ ಭೂಮಿ ಹೊಂದಿದೆ ಎಂಬ ಕಾರಣಕ್ಕೆ ಸರ್ಕಾರ ಉಳಿದ ಪರಿಹಾರ ಹಣವನ್ನು ತಡೆಹಿಡಿದಿತ್ತು. ಟ್ರಸ್ಟ್ ಆ ಪ್ರಕರಣದಲ್ಲಿ 2022ರಲ್ಲಿ ಗೆಲುವು ಸಾಧಿಸಿದ್ದರೂ, ಅದು ಮೂಲ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವುದಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದನ್ನು ಪ್ರಮುಖವಾಗಿ ಪ್ರಶ್ನಿಸಿದ್ದ ಟ್ರಸ್ಟ್, ಭೂಸ್ವಾಧೀನ ಪ್ರಕ್ರಿಯೆಯು ಕಾಲಮಿತಿಯೊಳಗೆ ಮುಗಿದಿಲ್ಲ ಮತ್ತು ಹೊಸ ಭೂಸ್ವಾಧೀನ ಕಾಯ್ದೆ (2013) ಅಡಿಯಲ್ಲಿ ಈ ಪ್ರಕ್ರಿಯೆಯು ರದ್ದಾಗಿದೆ ಎಂದು ವಾದಿಸಿತ್ತು. ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
Related Articles
Thank you for your comment. It is awaiting moderation.


Comments (0)