ನಕಲಿ ದಾಖಲೆ ಸೃಷ್ಟಿಸಿ, ಆಸ್ತಿ ಕಬಳಿಕೆ ಆರೋಪ: ಶ್ರೀನಿವಾಸ್‌ ಜಾಮೀನು ಅರ್ಜಿ ಸಂಬಂಧ ಸಿಬಿಐಗೆ ನೋಟಿಸ್

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಕೆ. ರಘುನಾಥ್‌ ಅವರ ನಕಲಿ ಸಹಿ ಮಾಡಿ, ಆಸ್ತಿ ಕಬಳಿಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಡಿ.ಕೆ. ಆದಿಕೇಶವಲು ನಾಯ್ಡು ಪುತ್ರ ಡಿ.ಎ. ಶ್ರೀನಿವಾಸ್‌ ಸಲ್ಲಿಸಿರುವ ಜಾಮೀನು ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ರಘುನಾಥ್‌ ನಕಲಿ ಸಹಿ ಮಾಡಿ, ಅವರ ಆಸ್ತಿ ಕಬಳಿಸಿದ ಆರೋಪ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲು ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಸಂಬಂಧ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಇದೇ ವೇಳೆ, ಪ್ರಕರಣದ ಮೂಲ ದೂರುದಾರೆಯಾದ ರಘುನಾಥ್‌ ಪತ್ನಿ ಎಂ. ಮಂಜುಳಾ ಅವರ ಮಧ್ಯಪ್ರವೇಶಿಕೆಗೂ ನ್ಯಾಯಾಲಯ ಅನುಮತಿಸಿತು.

ಪ್ರಕರಣವೇನು?
ಉದ್ಯಮಿ ರಘುನಾಥ್‌ ಅವರ ಹಲವಾರು ದಾಖಲೆ ಮತ್ತು ರಶೀದಿಗಳನ್ನು ಶ್ರೀನಿವಾಸ್‌ ತಿರುಚಿ ಅವುಗಳಿಗೆ ತಾವೇ ಸಹಿ ಮಾಡಿದ್ದು, ಅದರ ಫಲಾನುಭವಿಯೂ ಅವರೇ ಆಗಿದ್ದಾರೆ. ಇತರ ಆರೋಪಿಗಳ ಜತೆ ಶ್ರೀನಿವಾಸ್‌ ಪಿತೂರಿ ನಡೆಸಿ, ಪ್ರಮುಖ ಪಾತ್ರವಹಿಸಿದ್ದಾರೆ. ಆ ದಾಖಲೆಗಳಲ್ಲಿ ನಕಲಿ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಬಳಕೆ ಮಾಡಲಾಗಿದ್ದು, ಆ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಶ್ರೀನಿವಾಸ್ ಅವರೇ ಸೃಷ್ಟಿಸಿದ್ದಾರೆ. ಒಟ್ಟಾರೆ 60 ದಾಖಲೆಗಳನ್ನು ಸೃಷ್ಟಿಸಿದ್ದು, ಇವುಗಳಲ್ಲಿ 46ರಲ್ಲಿ ಅವರ ಸಹಿ ಇದೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದ್ದು, ಶ್ರೀನಿವಾಸ್‌ ಒಂಬತ್ತನೇ ಆರೋಪಿಯಾಗಿದ್ದಾರೆ.

Related Articles

Comments (0)

Leave a Comment