ಯೋಗೀಶ ಗೌಡರ್ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಜಾನೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
- by Jagan Ramesh
- January 27, 2026
- 25 Views
ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿ, ಜನವರಿ 9ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಹಾಲಿ ಪ್ರಕರಣದಲ್ಲಿ ಅರ್ಜಿದಾರರಿಗೆ ಮೊದಲು ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್, ಆನಂತರ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಪಡಿಸಿದೆ. ಅರ್ಜಿದಾರರ ಪರ ವಕೀಲರು, ವಿಪಿನ್ ಕುಮಾರ್ ಹಾಗೂ ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಆ ಪ್ರಕರಣದಲ್ಲಿ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆ ಬಳಿಕ ಷರತ್ತು ಉಲ್ಲಂಘನೆಯ ಕಾರಣಕ್ಕೆ ಸುಪ್ರೀಂಕೋರ್ಟ್‌ನಿಂದಲೇ ರದ್ದುಗೊಂಡಿದೆ. ಆದ್ದರಿಂದ, ವಿಪಿನ್ ಕುಮಾರ್ ಪ್ರಕರಣದ ತೀರ್ಪಿನಲ್ಲಿ ಅವಲೋಕಿಸಿರುವ ಅಂಶಗಳನ್ನು ಇಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಸುಪ್ರೀಂಕೋರ್ಟ್ ಜಾಮೀನು ಮಂಜೂರಾತಿ ಆದೇಶವನ್ನು ರದ್ದುಪಡಿಸುವುದು ಹಾಗೂ ಜಾಮೀನು ಷರತ್ತುಗಳ ಉಲ್ಲಂಘನೆಗಾಗಿ ಜಾಮೀನು ರದ್ದುಗೊಳಿಸುವುದು ಇವೆರಡರ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದ್ದು ಅದನ್ನು ಕಾಯ್ದುಕೊಳ್ಳಲೇಬೇಕು. ಅದರಂತೆ, ಅರ್ಜಿದಾರರು ಪ್ರಸ್ತುತ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬದಲು ಸುಪ್ರೀಂಕೋರ್ಟ್‌ಗೇ ಅರ್ಜಿ ಸಲ್ಲಿಸಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಅರ್ಜಿದಾರರು ಎತ್ತಿರುವ ಇತರ ವಾದಗಳನ್ನು ಪರಿಶೀಲಿಸುವುದು ಅಸಾಧ್ಯವಾಗಿದೆ. ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅವಕಾಶವಿಲ್ಲದಿರುವುದು ಜಾಮೀನು ನೀಡಲು ಆಧಾರವಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಇದಲ್ಲದೆ, ಪ್ರಕರಣದ ಇತರ ಸಹ-ಆರೋಪಿಗಳಿಗೆ ಈ ನ್ಯಾಯಾಲಯ ಜಾಮೀನು ನೀಡಿದ್ದು ಅದರ ಲಾಭವನ್ನು ಸಮಾನತೆಯ ಆಧಾರದಲ್ಲಿ ಅರ್ಜಿದಾರರಿಗೂ ನೀಡಬೇಕೆಂಬ ವಾದವನ್ನು ಪರಿಗಣಿಸಲಾಗದು. ಏಕೆಂದರೆ, ಅರ್ಜಿದಾರರ ಜಾಮೀನನ್ನು ಸುಪ್ರೀಂಕೋರ್ಟ್ ಮಂಜೂರು ಮಾಡಿ, ನಂತರ ರದ್ದುಪಡಿಸಿತ್ತು ಎಂದು ನ್ಯಾಯಪೀಠ ಹೇಳಿದೆ.
ಪ್ರತಿವಾದಿ ಸಿಬಿಐ ವಾದಿಸಿರುವಂತೆ ಅರ್ಜಿದಾರರು ಸಾಕ್ಷಿಗಳನ್ನು ತಿರುಚಿದ್ದಾರೆ. ಆದ್ದರಿಂದ, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಲ್ಲ ಎಂಬ ಅಂಶವನ್ನು ಇಲ್ಲಿ ಪರಿಶೀಲಿಸುವ ಅಗತ್ಯವಿಲ್ಲ. ಏಕೆಂದರೆ, ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಹೋಗುವುದೇ ಸೂಕ್ತವೆಂಬ ಅಭಿಪ್ರಾಯವನ್ನು ಈಗಾಗಲೇ ವ್ಯಕ್ತಪಡಿಸಲಾಗಿದೆ. ಈ ಎಲ್ಲ ಅವಲೋಕನಗಳಿಗೆ ಒಳಪಟ್ಟು ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಂಬಂಧ ಅರ್ಜಿದಾರರು ಆಧರಿಸಿರುವ ಎಲ್ಲ ವಾದಗಳನ್ನು ಮುಕ್ತವಾಗಿರಿಸಲಾಗಿದೆ. ಅರ್ಜಿದಾರರ ಮನವಿ ಕುರಿತಂತೆ ಮೆರಿಟ್ ಮೇಲೆ ಯಾವುದೇ ತೀರ್ಮಾನವನ್ನು ನ್ಯಾಯಾಲಯ ದಾಖಲಿಸಿಲ್ಲ. ಅರ್ಜಿದಾರರು ಜಾಮೀನು ಕೋರಿ ಸುಪ್ರೀಂಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸುವುದು ಸೂಕ್ತ ಎಂಬ ಕಾರಣಕ್ಕೆ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
Related Articles
Thank you for your comment. It is awaiting moderation.


Comments (0)