ಬಿಜೆಪಿ, ಜೆಡಿಎಸ್ ಶಾಸಕರಿಗೆ ಒಂದು ನಯಾಪೈಸೆ ಅ‌ನುದಾನ ಬಿಡುಗಡೆಯಾಗಿಲ್ಲ; ವೆಂಕಟಶಿವಾರೆಡ್ಡಿ ವಕೀಲರ ಆಕ್ಷೇಪ

ಬೆಂಗಳೂರು: ಅನುದಾನ ಹಂಚಿಕೆ ಮತ್ತು ಬಿಡುಗಡೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿಯಿಂದ ಗೆದ್ದ ಶಾಸಕರಿಗೆ ಎರಡೂವರೆ ವರ್ಷಗಳಲ್ಲಿ ಈವರೆಗೆ ಒಂದು ನಯಾ ಪೈಸೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಕೋಲಾರ ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಪರ ವಕೀಲರು ಹೈಕೋರ್ಟ್‌‌ನಲ್ಲಿ ಆರೋಪಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವ ವಿಚಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿ ಶ್ರೀನಿವಾಸಪುರ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲಾಗಿರುವ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (ಸಿಎಂಐಡಿಪಿ) ಶಾಸಕರಿಗೆ ಅನುದಾನ‌ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಹ ಪಿಐಎಲ್ ಸಲ್ಲಿಸಿದ್ದಾರೆ.

ಈ ಎರಡೂ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಶಾಸಕ ವೆಂಕಟಶಿವಾರೆಡ್ಡಿ ಪರ ವಕೀಲರು ವಾದ ಮಂಡಿಸಿ, ಅನುದಾನ ಹಂಚಿಕೆ ಮತ್ತು ಬಿಡುಗಡೆಯಲ್ಲಿ ಸರ್ಕಾರ ಶಾಸಕರ ನಡುವೆ ಭಾರಿ ತಾರತಮ್ಯ ಮಾಡುತ್ತಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಯಥೇಚ್ಛವಾಗಿ ಅನುದಾನ ನೀಡಲಾಗುತ್ತಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ಒಂದು ನಯಾ ಪೈಸೆ ಅನುದಾನ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಪ್ರತಿಪಕ್ಷಗಳ ಶಾಸಕರಿಗೆ ಅನನುಕೂಲ ಉಂಟು ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಪರ ವಕೀಲರು, ಅರ್ಜಿಗಳಲ್ಲಿ ಪ್ರಸ್ತಾಪಿಸಲಾಗಿರುವ ವಿಷಯದ ಬಗ್ಗೆ ಉತ್ತರಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ನಿಮಗೆ (ಸರ್ಕಾರಕ್ಕೆ) ಇನ್ನೆಷ್ಟು ಸಮಯ ಬೇಕು ಎಂದು ಬೇಸರದಿಂದ ಕೇಳಿತಲ್ಲದೆ, ಅಂತಿಮವಾಗಿ ಶಾಸಕರಿಗೆ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.

Related Articles

Comments (0)

Leave a Comment