ವಿಚಾರಣಾ ನ್ಯಾಯಾಲಯದಲ್ಲೇ ಮೊದಲು ಜಾಮೀನು ಅರ್ಜಿ ಸಲ್ಲಿಸಿ; ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮನೆ ಕೆಲಸಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಮೊದಲಿಗೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಆ ಜಾಮೀನು ಅರ್ಜಿ ಕುರಿತು ವಿಚಾರಣಾ ನ್ಯಾಯಾಲಯ 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಎರಡನೇ ಬಾರಿಗೆ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿಯ ಹಿಂದಿನ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಆರೋಪಿ ಮೊದಲಿಗೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಅಲ್ಲಿ ಅರ್ಜಿ ವಜಾಗೊಂಡ ಸಂದರ್ಭದಲ್ಲಿ ಹೈಕೋರ್ಟ್‌ಗೆ ಬರಬಹುದು. ಆದರೆ, ಹಾಲಿ ಪ್ರಕರಣದಲ್ಲಿ ನೇರವಾಗಿ ಹೈಕೋರ್ಟ್‌ಗೆ ಬಂದಿರುವುದರಿಂದ ಅವರ ಅರ್ಜಿ ಪುರಸ್ಕರಿಸಬಾರದು ಎಂದು ವಾದ ಮಂಡಿಸಿದ್ದರು.

ಇದೇ ವಿಚಾರವನ್ನು ಬುಧವಾರ ಪ್ರಸ್ತಾಪಿಸಿದ ನ್ಯಾಯಪೀಠ, ಮೊದಲಿಗೆ ಅರ್ಜಿದಾರರು ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಅರ್ಜಿ ತಿರಸ್ಕೃತಗೊಂಡರೆ ಹೈಕೋರ್ಟ್‌ ಮೆಟ್ಟಿಲೇರಲು ಅವಕಾಶ ಇದ್ದೇ ಇರುತ್ತದೆ. ಪ್ರಜ್ವಲ್‌ ಅವರು ಸಲ್ಲಿಸುವ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆ ವೇಳೆ ಪ್ರಜ್ವಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರದೆಯೇ ಹೈಕೋರ್ಟ್‌ಗೆ ಬರಬಹುದಾಗಿದೆ ಎಂದು ಪ್ರತಿಪಾದಿಸಿದರು. ಇದನ್ನು ಒಪ್ಪದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದಲ್ಲಿಯೇ ಮೊದಲಿಗೆ ಅವಕಾಶ ಬಳಕೆ ಮಾಡುವಂತೆ ಸೂಚಿಸಿತು.

Related Articles

Comments (0)

Leave a Comment