ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ; ಶಾಸಕ ಕೊತ್ತೂರು ಮಂಜುನಾಥ್ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- April 18, 2026
- 3 Views
ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರ ಕುರಿತ ಕಾನೂನು ಹೋರಾಟದಲ್ಲಿ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್‌ಗೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.
ತಮಗೆ ನೀಡಲಾಗಿದ್ದ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಜಿ. ಮಂಜುನಾಥ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ (ಏಪ್ರಿಲ್ 17) ವಜಾಗೊಳಿಸಿದೆ.
ಇದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶದಂತೆ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ ಬಗ್ಗೆ ಮಂಜುನಾಥ್ ತನಿಖೆ ಎದುರಿಸಲೇಬೇಕಾಗಿದೆ.
ಮೇಲ್ಮನವಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿದಾರರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂಬ ಗಂಭೀರ ಆರೋಪವಿದೆ. ಅವರು 2008ರಲ್ಲಿ ಜಾತಿ ಪ್ರಮಾಣಪತ್ರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆನಂತರ, ಅರ್ಜಿದಾರರು ಅದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯೂ ಸಹ ವಜಾಗೊಂಡಿದೆ. ಅಷ್ಟಕ್ಕೇ ಸುಮ್ಮನಾಗದೆ ಅರ್ಜಿದಾರರು 2012ರ ಏಪ್ರಿಲ್ 3ರಂದು ಎಸ್‌ಸಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಹೇಳಿದೆ.
ಸ್ಥಳೀಯ ತಹಶೀಲ್ದಾರ್ ಅವರು ತಮ್ಮ ಕಚೇರಿಯ ಕಂಪ್ಯೂಟರ್ ಅನ್ನು ದುರುಪಯೋಗಪಡಿಸಿಕೊಂಡು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಳ್ಳಲಾಗಿದೆ. ಆ ಜಾತಿ ಪ್ರಮಾಣಪತ್ರ ವಿತರಣೆಯ ಯಾವ ದಾಖಲೆಗಳೂ ತಮ್ಮ ಬಳಿ ಇಲ್ಲವೆಂದು ಹೇಳಿದ್ದಾರೆ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶದಂತೆ ರಾಜ್ಯ ಸರ್ಕಾರ ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದಿರುವ ವಿಭಾಗೀಯ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿದೆ.
ಜತೆಗೆ, ಮೇಲ್ಮನವಿದಾರರು ಬೇಡ ಜಂಗಮ ಸಮುದಾಯಕ್ಕೆ ಸೇರಿಲ್ಲ. ಅವರು ಬೈರಾಗಿ ಸಮುದಾಯಕ್ಕೆ ಸೇರಿದವರೆಂದು ಹೇಳಲು ಸಾಕಷ್ಟು ದಾಖಲೆಗಳಿವೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ (ಡಿಸಿವಿಸಿ) ದಾಖಲೆಗಳಲ್ಲೂ ಆ ಅಂಶ ವ್ಯಕ್ತವಾಗಿದೆ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶ ಸರಿ ಇದ್ದು, ಅದರಲ್ಲಿ ಹಸ್ತಕ್ಷೇಪ ಮಾಡಬೇಕಾದ ಪ್ರಮೇಯವೇ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಜಿ. ಮಂಜುನಾಥ್ ಅವರು ತಾವು ಪರಿಶಿಷ್ಟ ಜಾತಿಗಳ ಪಟ್ಟಿಗೆ ಬರುವ ಬುಡುಗ ಜಂಗಮ ಜಾತಿಗೆ ಸೇರಿದವರೆಂದು ಘೋಷಿಸಿಕೊಂಡು 2012ರಲ್ಲಿ ಎಸ್‌ಸಿ ಪ್ರಮಾಣಪತ್ರಪಡೆದು 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು.
ಪರಿಶಿಷ್ಟ ಜಾತಿಗೆ ಸೇರಿರುವುದನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಹೈಕೋರ್ಟ್ 2018ರ ಏಪ್ರಿಲ್‌ನಲ್ಲಿ ಅಸಿಂಧುಗೊಳಿಸಿತ್ತು. ಆ ತೀರ್ಪಿನ ವಿರುದ್ಧ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್, ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನೆ ಸಮಿತಿ ಜಿ. ಮಂಜುನಾಥ್ ಜಾತಿಯನ್ನು ಪರಿಶೀಲಿಸಬೇಕು. ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಪುನಃ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಆದೇಶಿಸಿತ್ತು.
ಜಿಲ್ಲಾಧಿಕಾರಿಗಳ ನೇತೃತ್ವದ ಡಿಸಿವಿಸಿ ಜಿ. ಮಂಜುನಾಥ್ ಬುಡಗ ಜಂಗಮ ಜಾತಿಗೆ ಸೇರಿಲ್ಲ, ಅವರು ಬೈರಾಗಿ ಜಾತಿಗೆ ಸೇರಿದವರು ಎಂದು ನಿರ್ಣಯ ಕೈಗೊಂಡಿತ್ತು. ಬುಡಗ ಜಂಗಮ ಪರಿಶಿಷ್ಟ ಜಾತಿಯಾದರೆ, ಬೈರಾಗಿ ಒಬಿಸಿ ಪ್ರವರ್ಗ-1ಕ್ಕೆ ಸೇರುತ್ತದೆ. ಸಮಿತಿಯ ನಿರ್ಣಯವನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಏಕಸದಸ್ಯ ನ್ಯಾಯಪೀಠ ಶಾಸಕ ಮಂಜುನಾಥ್ ಅರ್ಜಿಯನ್ನು ತಿರಸ್ಕರಿಸಿ, ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಸೂಚಿಸಿತ್ತು. ಇದರಿಂದ, ಮಂಜುನಾಥ್ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.



Comments (0)