ಮ್ಯಾರೇಜ್ ಇನ್ವಿಟೇಷನ್ ಎಪಿಕೆ ಫೈಲ್ ಕಳುಹಿಸಿ ವಂಚನೆ; ಲೀಗಲ್‌ಪೇ ಪಾತ್ರ ಸಾಬೀತುಪಡಿಸುವ ದಾಖಲೆ ಕೇಳಿದ ಹೈಕೋರ್ಟ್
- by LegalSamachar
- September 21, 2026
- 3 Views
ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ನಕಲಿ ‘ಮದುವೆ ಆಮಂತ್ರಣ’ದ ಎಪಿಕೆ ಫೈಲ್ ಕಳುಹಿಸಿ ಸುಮಾರು 12.5 ಲಕ್ಷ ರೂ. ಸೈಬರ್ ವಂಚನೆ ನಡೆಸಿದ ಪ್ರಕರಣಕ್ಕೂ ಲೀಗಲ್‌ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ಗೂ ಇರುವ ಸಂಬಂಧವನ್ನು ಸಾಬೀತುಪಡಿಸುವ ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಲೀಗಲ್‌ಪೇ ಸಂಸ್ಥೆ ಸಲ್ಲಿಸಿರುವ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಅರ್ಜಿದಾರ ಕಂಪನಿಯು ಆರೋಪಿತ ವಂಚನೆಯಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ದಾಖಲೆಗಳನ್ನು ಹುಳಿಮಾವು ಪೊಲೀಸರು ಅಥವಾ ಸೈಬರ್ ಅಪರಾಧ ಠಾಣೆಯ ತನಿಖಾಧಿಕಾರಿಗಳು ಲಿಖಿತ ರೂಪದಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ಅರ್ಜಿಗಳ ಕುರಿತು ಸೂಕ್ತ ಆದೇಶ ನೀಡಲು ಈ ಮಾಹಿತಿ ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಲೀಗಲ್‌ಪೇ ಪರವಾಗಿ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್ ವಾದ ಮಂಡಿಸಿ, ಮಧ್ಯವರ್ತಿ ಪಾವತಿ ಗೇಟ್‌ವೇ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ವಂಚನೆಯ ಸಂಪೂರ್ಣ ಹಣ ಲೀಗಲ್‌ಪೇ ಖಾತೆಗೆ ಜಮೆಯಾಗಿರುವುದನ್ನು ಸರ್ಕಾರ ಸಾಬೀತುಪಡಿಸಿದರೆ ಅರ್ಜಿಗಳನ್ನು ಹಿಂಪಡೆಯುವುದಾಗಿ ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಾಲಯ, ವಂಚನೆಯ ಹಣ ಸದ್ಯ ಯಾವ ಖಾತೆಯಲ್ಲಿದೆ ಎಂಬುದನ್ನು ಗುರುತಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಜತೆಗೆ, ವಂಚನೆಯ ಹಣ ಲೀಗಲ್‌ಪೇ ಖಾತೆಯಲ್ಲಿದೆ ಎಂದು ಸರ್ಕಾರ ಹೇಳುತ್ತಿದೆ. ಹಣ ವಾಸ್ತವವಾಗಿ ಯಾರ ಖಾತೆಯಲ್ಲಿದೆ ಎಂಬ ವರದಿ ತರಲು ಸೂಚಿಸಲಾಗಿದೆ. ಒಂದು ವೇಳೆ ಹಣ ನಿಮ್ಮ ಖಾತೆಯಲ್ಲಿದ್ದರೆ ಅರ್ಜಿಗಳನ್ನು ವಜಾಗೊಳಿಸಲಾಗುವುದು. ಲೀಗಲ್‌ಪೇ ಖಾತೆಯಲ್ಲಿ ಇಲ್ಲದಿದ್ದರೆ ನಿಮಗೆ ರಕ್ಷಣೆ ದೊರೆಯಲಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ತಿಳಿಸಿತು.
ಸರ್ಕಾರದ ಪರ ವಕೀಲರು, ಪ್ರಕರಣದ ಸ್ವರೂಪವನ್ನು ಪರಿಗಣಿಸಿ ತನಿಖೆಯನ್ನು ಹುಳಿಮಾವು ಪೊಲೀಸ್ ಠಾಣೆಯಿಂದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ. ಮೌಖಿಕ ಆದೇಶದ ಅನುಸಾರ ದೂರುಗಳನ್ನು ಸೈಬರ್ ಅಪರಾಧ ಠಾಣೆಗಳಿಗೆ ಕಳುಹಿಸಲಾಗಿದೆ ಎಂದು ವಿವರಿಸಿದರು. ಆಗ ಮೌಖಿಕ ಆದೇಶಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿತು.
ಪ್ರಕರಣವೇನು?
2026ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮೂವರು ದೂರುದಾರರಾದ ಬಿ.ಕೆ. ನಾಗೇಶಯ್ಯ 7,44,989 ರೂ., ಸುಭಾಷ್ ಚಂದ್ರ ಜುಜಾರ್ಥ್ 2,69,729 ರೂ ಮತ್ತು ವಶಿಷ್ಠ ನಾರಾಯಣ ಝಾ 2,34,917 ರೂ. ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದರು. ವಾಟ್ಸ್‌ಆ್ಯಪ್‌ನಲ್ಲಿ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡಿದ್ದರಿಂದ ಹಣ ಕಳೆದುಕೊಂಡಿರುವುದಾಗಿ ದೂರುದಾರರು ಆರೋಪಿಸಿದ್ದರು. ಆ ದೂರುಗಳ ಆಧಾರದಲ್ಲಿ ಹುಳಿಮಾವು ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ 2000ರ ಸೆಕ್ಷನ್ 66(ಸಿ) ಮತ್ತು 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 318(4) ಮತ್ತು 319(2)ರ ಅಡಿಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್‌ಗಳಲ್ಲಿ ಲೀಗಲ್‌ಪೇ ಕಂಪನಿಯನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಇದೇ ಪ್ರಕರಣದಲ್ಲಿ ಕಂಪನಿಯ ಅಧಿಕಾರಿಗಳಿಗೆ ಹೈಕೋರ್ಟ್ ಈ ಹಿಂದೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.
Related Articles
Thank you for your comment. It is awaiting moderation.


Comments (0)