ಪತಿಯ ಪ್ರೇಯಸಿ ಸಂಬಂಧಿ ಅಲ್ಲ; ಯುವತಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಲಾಗದು ಎಂದು ಪುನುರುಚ್ಚರಿಸಿರುವ ಹೈಕೋರ್ಟ್, ಯುವತಿಯೊಬ್ಬರ ವಿರುದ್ಧ (ಪತಿಯ ಸ್ನೇಹಿತೆ) ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 85ರ (ಮಹಿಳೆಗೆ ಪತಿ ಅಥವಾ ಪತಿಯ ಸಂಬಂಧಿಕರಿಂದ ಕಿರುಕುಳ) ಅಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.

ಬೆಂಗಳೂರಿನ ಹಲಸೂರು ಗೇಟ್ ಉಪ-ವಿಭಾಗದ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ನಗರದ 6ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಕೋರ್ಟ್‌ನಲ್ಲಿರುವ ವಿಚಾರಣೆ ರದ್ದು ಕೋರಿ ನಗರದ 26 ವರ್ಷದ ಯುವತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದಿಂದ ಮಾತ್ರ ಸಂಬಂಧಿಯ ಸ್ಥಾನಮಾನ ಸಿಗುತ್ತದೆ. ವಿವಾಹೇತರ ಸಂಬಂಧ ಹೊಂದಿರುವ ಪ್ರೇಯಸಿ ಅಥವಾ ಮಹಿಳೆಯನ್ನು ಪತಿಯ ಸಂಬಂಧಿ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್‌ ಈ ಹಿಂದೆಯೇ ಸ್ಪಷ್ಟಪಡಿಸಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ಪತ್ನಿಯ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಎನ್ಎಸ್ ಸೆಕ್ಷನ್ 85ರ ಅಡಿಯಲ್ಲಿ ಪತಿಯ ಪ್ರೇಯಸಿಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
ದೂರುದಾರ ಮಹಿಳೆಯ ಪತಿಯ ಪ್ರೇಯಸಿ ಎಂದು ಆರೋಪಿಸಲಾಗಿರುವ ಅರ್ಜಿದಾರ ಯುವತಿ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 85, 74 (ಯಾವುದೇ ಮಹಿಳೆಯ ಘನತೆ ಅಥವಾ ಶೀಲಕ್ಕೆ ಭಂಗ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ), 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಮಾಡಲಾಗುವ ಉದ್ದೇಶಪೂರ್ವಕ ಅವಮಾನ), 351(2) (ಕ್ರಿಮಿನಲ್‌ ಬೆದರಿಕೆ) ಹಾಗೂ 3(5) (ಸಮಾನ ಉದ್ದೇಶ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ–1961ರ ಸೆಕ್ಷನ್ 3 ಮತ್ತು 4ರ (ವರದಕ್ಷಿಣೆ ನೀಡುವುದು, ತೆಗೆದುಕೊಳ್ಳುವುದು ಅಥವಾ ಅದಕ್ಕಾಗಿ ಬೇಡಿಕೆ ಇಡುವುದು ಕಾನೂನುಬಾಹಿರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ರದ್ದು ಕೋರಿ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment