ಅಪ್ರಾಪ್ತೆಗೆ ಲೈಂಗಿಕ ಕಿರುಕುಳದ ಆರೋಪ; ಬಾಲಮಂಜುನಾಥ ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- April 25, 2026
- 6 Views
ಬೆಂಗಳೂರು: ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಎನ್. ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪೋಕ್ಸೊ ಪ್ರಕರಣ ರದ್ದು ಕೋರಿ ಎನ್. ಮಂಜುನಾಥ್ ಹಾಗೂ ಕೆ. ಅಭಿಷೇಕ್ ಸಲ್ಲಿಸಿದ್ದ ಅರ್ಜಿ ಮತ್ತು ಬಾಲಮಂಜುನಾಥ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಪ್ರಕಟಿಸಿತು.
ಅರ್ಜಿದಾರರಾದ ಎನ್. ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ಹಾಗೂ ಕೆ. ಅಭಿಲಾಷ್ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ಅವರ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಈ ಇಬ್ಬರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿತು. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಹುಲಿಯೂರು ದುರ್ಗ–ಮಾಗಡಿ ರಸ್ತೆಯಲ್ಲಿರುವ ಕಾಡು ಶನೇಶ್ವರ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ಮಂಜುನಾಥ ಸ್ವಾಮೀಜಿ ಅವರ ಬಳಿಕ ಆರೋಗ್ಯ ಸಮಸ್ಯೆಗೆ ಪರಿಹಾರ ಕೇಳಲು ಸಂತ್ರಸ್ತೆಯು 15 ವರ್ಷದವಳಿದ್ದಾಗ ತಂದೆಯ ಜತೆ ಮಠಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಷ್ಟಮಂಗಳ ಪ್ರಾಣಾಸನ ಮಾಡಿಸುವ ವೇಳೆ ಪರಿಸ್ಥಿತಿಯ ಲಾಭ ಪಡೆದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆನಂತರ, ವಿಡಿಯೊ ಕರೆ ಮಾಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗ ಪೊಲೀಸರು ಪೋಕ್ಸೊ ಕಾಯ್ದೆ ಸೆಕ್ಷನ್ 4 (ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ), ಸೆಕ್ಷನ್ 6 (ಲೈಂಗಿಕ ತೃಷೆ ತೀರಿಸಿಕೊಳ್ಳಲು ಕ್ರೂರ ಪ್ರಯತ್ನ), ಸೆಕ್ಷನ್ 11(iv) (ಲೈಂಗಿಕ ದೌರ್ಜನ್ಯ ಎಸಗಲು ನೀಲಿ ಚಿತ್ರ ತೋರಿಕೆ), ಸೆಕ್ಷನ್ 12 (ಮಗುವಿಗೆ ಲೈಂಗಿಕ ಕಿರುಕುಳ). ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(E) (ಖಾಸಗಿತನದ ಉಲ್ಲಂಘನೆ) ಮತ್ತು ಸೆಕ್ಷನ್ 67(A) (ಕೃತ್ಯದ ಚಿತ್ರೀಕರಿಸಿದ ದೃಶ್ಯದ ಹಂಚಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354(A)(1)(i) (ಅಸಹಜ ಲೈಂಗಿಕ ನಡವಳಿಕೆ), 354(A)(1)(ii) (ಲೈಂಗಿಕ ಕೃತ್ಯಕ್ಕೆ ಬೇಡಿಕೆ), ಸೆಕ್ಷನ್ 417ವಂಚನೆ, ಸೆಕ್ಷನ್ 342 (ಅಕ್ರಮ ಬಂಧನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಜತೆಗೆ ಸೆಕ್ಷನ್ 34 (ಸಮಾನ ಉದ್ದೇಶ); ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯ್ದೆ ಸೆಕ್ಷನ್ 3 (ಕಾನೂನುಬಾಹಿರ ಚಟುವಟಿಕೆಗಳಿಗೆ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ), ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 30ರ (ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಬಳಕೆ) ಅಡಿ ಪ್ರಕರಣ ದಾಖಲಿಸಿದ್ದರು.
Related Articles
Thank you for your comment. It is awaiting moderation.



Comments (0)