ಇನ್ಸ್ಟಾಗ್ರಾಂ‌ನಲ್ಲಿ ಮೆಟ್ರೊ ಪ್ರಯಾಣಿಕ ಮಹಿಳೆಯರ ವಿಡಿಯೊ ಅಪ್ಲೋಡ್‌; ಆರೋಪಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಇನ್ಸ್ಟಾಗ್ರಾಂ‌ನಲ್ಲಿ ‘ಮೆಟ್ರೊ ಚಿಕ್ಸ್’ ಎಂಬ ಹೆಸರಿನ ಖಾತೆ ರಚಿಸಿ, ಮೆಟ್ರೊ ರೈಲಿನಲ್ಲಿ ಸಂಚರಿಸುವ ಮಹಿಳೆಯರ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣ‌ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ‌ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಬಿ.ಕೆ. ದಿಗಂತ್‌ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಮೆಟ್ರೊದಲ್ಲಿ ಮಹಿಳೆಯರ ಹಿಂಭಾಗದ ಫೋಟೊಗಳನ್ನು ತೆಗೆದುಕೊಂಡು ಮೆಟ್ರೊ ಚಿಕ್ಸ್‌ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡುತ್ತೀರಾ? ಏನಿದು ಅಸಹ್ಯ. ಇದನ್ನು ಹೇಗೆ ಮಾಡುತ್ತೀರಿ? ಮೆಟ್ರೊನೂ ಸುರಕ್ಷಿತವಾಗಿ ಬಿಡುವುದಿಲ್ಲ. ಯಾವ ರೀತಿಯ ಮನುಷ್ಯರು ನೀವು? ಯಾಕೆ ಆ ರೀತಿಯ ಫೋಟೊಗಳನ್ನು ತೆಗೆದಿರಿ. ಎಲ್ಲಿ ಹೋದರೂ ಮಹಿಳೆಯರನ್ನು ಬಿಡುವುದಿಲ್ಲ. ಎಲ್ಲೂ ಮಹಿಳೆಯರನ್ನು ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ ಎಂದು ಕಿಡಿಕಾರಿತು.

ಅರ್ಜಿದಾರರ ಪರ ವಕೀಲರು ಸಿಸಿ ಕ್ಯಾಮರಾಗಳು ಇವೆ. ಇಲ್ಲಿ ಪೊಲೀಸರೇ ದೂರುದಾರರಾಗಿದ್ದಾರೆ. ಯಾವುದೇ ಅಪರಾಧವಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇನ್ಸ್ಟಾಗ್ರಾಂ ಪೇಜ್‌ ಬೇರೆ, ಅದರಲ್ಲಿ ಮೆಟ್ರೊ ಚಿಕ್ಸ್‌ ರೀಲ್ಸ್‌… ತಾಂತ್ರಿಕ ವಿಚಾರಗಳನ್ನು ಮುಂದು ಮಾಡಿ ಇಂಥ ಪ್ರಕರಣದಲ್ಲಿ ಪಾರಾಗಲು ಬಿಡುವುದಿಲ್ಲ. ಕೆಲ ವಿಷಯಗಳಲ್ಲಿ ತಾಂತ್ರಿಕ ವಿಚಾರಗಳನ್ನು ನಿಲ್ಲಿಸಲು ಸಮಯ ಬಂದಿದೆ ಎಂದಿತಲ್ಲದೇ, ಮಹಿಳೆಯರ ಹಿಂಬದಿಯ ಚಿತ್ರ ತೆಗೆದು ವೆಬ್‌ಸೈಟ್‌ಗೆ ಹಾಕುವುದು ಅಪರಾಧವಲ್ಲದೆ ಮತ್ತೇನು ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿತು.

ಪ್ರಕರಣವೇನು?
ಮೆಟ್ರೊ ಚಿಕ್ಸ್‌ (ಬೆಂಗಳೂರು ಮೆಟ್ರೊ ಕ್ಲಿಕ್ಸ್) ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೊದಲ್ಲಿ ಸಂಚರಿಸುವ ಹಾಗೂ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಮಹಿಳೆಯರ ಮುಂಭಾಗ ಮತ್ತು ಹಿಂಭಾಗದ ವಿಡಿಯೊಗಳನ್ನು ಚಿತ್ರೀಕರಿಸಿ ಅಪ್‌ಲೋಡ್‌ ಮಾಡಿದ ಆರೋಪದಲ್ಲಿ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಇನ್ಸ್ಟಾಗ್ರಾಂ ಖಾತೆ ಹೊಂದಿದ್ದ ಅರ್ಜಿದಾರನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ) ಸೆಕ್ಷನ್‌ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು), ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 78(2) (ಹಿಂಬಾಲಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪ ಪಟ್ಟಿಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 238(C) (ಸಾಕ್ಷ್ಯನಾಶ) ಅಡಿ ಆರೋಪವನ್ನು ಸೇರಿಸಲಾಗಿದೆ. ಪ್ರಕರಣವು ಬೆಂಗಳೂರಿನ 2ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯದಲ್ಲಿ ವಿಚಾರಣಾ‌ ಹಂತದಲ್ಲಿದೆ. ಇದರಿಂದ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.

Related Articles

Comments (0)

Leave a Comment