ನ್ಯಾಷನಲ್ ಪಬ್ಲಿಕ್ ಸ್ಕೂಲ್ನಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ; ಸರ್ಕಾರ, ಜಿಬಿಎಗೆ ಹೈಕೋರ್ಟ್ ನೋಟಿಸ್
- by Prashanth Basavapatna
- March 27, 2026
- 115 Views
ಬೆಂಗಳೂರು: ರಾಜಾಜಿನಗರ 5ನೇ ಬ್ಲಾಕ್ನಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ (ಎನ್ಪಿಎಸ್) ಅಕ್ಕಪಕ್ಕದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಜಿಬಿಎಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ರಾಜಾಜಿನಗರ 5ನೇ ಬ್ಲಾಕ್ ನಿವಾಸಿಗಳ ಕಲ್ಯಾಣ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ನ್ಯಾಷನಲ್ ಪಬ್ಲಿಕ್ ಶಾಲೆಯ ನಡವಳಿಕೆಯಿಂದಾಗಿ ಅರ್ಜಿದಾರರು ಎದುರಿಸಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವರು ಸಲ್ಲಿಸಿದ ಮನವಿಗಳು/ಕೋರಿಕೆಗಳನ್ನು ಪರಿಗಣಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿದರು.
ಅರ್ಜಿದಾರರ ಆಕ್ಷೇಪವೇನು?
ಶಾಲೆಯು ದಿನವಿಡೀ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸುತ್ತದೆ. ಇದು ಸ್ಥಳೀಯರಿಗೆ, ವಿಶೇಷವಾಗಿ ಶಾಲೆಯ ಅಕ್ಕಪಕ್ಕದ ಮನೆಗಳಲ್ಲಿರುವ ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ಜನರಿಗೆ ತೊಂದರೆಯಾಗುತ್ತದೆ. ಧ್ವನಿವರ್ಧಕಗಳ ಬಳಕೆಯು ಪ್ರದೇಶದಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಜತೆಗೆ, ನಿಯಮಾನುಸಾರ ಆ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಶಾಲಾ ಪ್ರವೇಶದಲ್ಲಿ ಕಡ್ಡಾಯವಾಗಿ ಆದ್ಯತೆ ನೀಡಬೇಕು. ಆದರೆ, ಆದ್ಯತೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಶಾಲೆಯು ತನ್ನ ಬಸ್ಗಳನ್ನು ಕ್ಯಾಂಪಸ್ನ ಹೊರಗೆ ನಿಲ್ಲಿಸುವುದರಿಂದ ರಸ್ತೆಯುದ್ದಕ್ಕೂ ದಟ್ಟಣೆ ಉಂಟಾಗುತ್ತದೆ. ನೆರೆಹೊರೆಯವರಿಗೆ ತಿಳಿಸದೆ ಶಾಲಾ ಅಧಿಕಾರಿಗಳು ಪದೇಪದೆ ಕಾರ್ಯಕ್ರಮಗಳು ಮತ್ತು ಪೋಷಕ-ಶಿಕ್ಷಕರ ಸಭೆಗಳನ್ನು (ಪಿಟಿಎಂ) ಆಯೋಜಿಸುತ್ತಿದ್ದಾರೆ. ಇದರಿಂದ, ವಾಹನ ದಟ್ಟಣೆ ಇನ್ನೂ ಅಧಿಕವಾಗಿ ಸ್ಥಳೀಯರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Related Articles
Thank you for your comment. It is awaiting moderation.


Comments (0)