ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ; ಮಾಜಿ ಅಧ್ಯಕ್ಷ ಕೆ. ರಾಮಕೃಷ್ಣ‌ಗೆ ಹೈಕೋರ್ಟ್‌ನಿಂದ ಜಾಮೀನು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮತದಲ್ಲಿ ನಡೆದಿರುವ 1,544.43 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ. ರಾಮಕೃಷ್ಣ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಕೆ. ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ 76 ವರ್ಷ ವಯಸ್ಸಾಗಿರುವುದು, ಅವರು 4 ವರ್ಷಗಳಿಗೂ ಅಧಿಕ ಸಮಯದಿಂದ ಜೈಲಿನಲ್ಲಿರುವುದು ಹಾಗೂ ವಿಚಾರಣೆಯ ವಿಳಂಬ ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರರು 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಶ್ಯೂರಿಟಿ ಒದಗಿಸಬೇಕು, ವಿಚಾರಣೆಗೆ ನಿರಂತರವಾಗಿ ಹಾಜರಾಗಬೇಕು ಹಾಗೂ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು ಎಂಬ ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.

ಪ್ರಕರಣವೇನು?
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 2012ರ ಏಪ್ರಿಲ್‌ನಿಂದ 2018ರ ಜನವರಿ ನಡುವೆ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಆರ್‌ಬಿಐ ಪರಿಶೀಲನೆಯ ಬೆನ್ನಿಗೇ 2020ರ ಜನವರಿಯಲ್ಲಿ ಸಹಕಾರ ಸೊಸೈಟಿಗಳ ನೋಂದಣಾಧಿಕಾರಿ ದೂರು ನೀಡಿದ್ದರು.

ಸಾಲ ಮತ್ತು ಮುಂಗಡಗಳ ಖಾತೆಗಳಿಗೆ ಡೆಬಿಟ್ ಮಾಡುವ ಮೂಲಕ ನಕಲಿ ಠೇವಣಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು, 1,544.43 ಕೋಟಿ ರೂ. ಮೌಲ್ಯದ 2,876 ಸಾಲಗಳಿಗೆ ದಾಖಲೆಗಳು ಲಭ್ಯವಿಲ್ಲ, ಇವುಗಳಿಗೆ ಯಾವುದೇ ಭದ್ರತೆ ಪಡೆಯದೇ ಸಾಲ ಮಂಜೂರು ಮಾಡಲಾಗಿದೆ ಎನ್ನಲಾಗಿದೆ. 892.85 ಕೋಟಿ ರೂ. ಸಾಲವನ್ನು 24 ಫಲಾನುಭವಿಗಳಿಗೆ ವಿಸ್ತರಿಸಲಾಗಿದ್ದು, ಈ ವೇಳೆ ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವೂ ಇದೆ.

ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನ ಅನ್ವಯ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ರಾಮಕೃಷ್ಣ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕ್ರಿಯೆ ಆರಂಭಿಸಿದ್ದು, ಅವರನ್ನು ನಾಲ್ಕನೇ ಆರೋಪಿಯನ್ನಾಗಿಸಿತ್ತು.

ಈ ಹಿಂದೆ ವಿಚಾರಣಾ ನ್ಯಾಯಾಲಯ, ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ರಾಮಕೃಷ್ಣ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದವು. ನಾಲ್ಕು ವರ್ಷಗಳಿಗೂ ಅಧಿಕ ಅವಧಿಯಿಂದ ಜೈಲಿನಲ್ಲಿರುವುದು ಮತ್ತು ವಿಚಾರಣೆ ವಿಳಂಬವಾಗುತ್ತಿರುವುದನ್ನು ಪರಿಗಣಿಸಿ ಹೈಕೋರ್ಟ್‌ ಸದ್ಯ ಜಾಮೀನು ಮಂಜೂರು ಮಾಡಿದೆ.

Related Articles

Comments (0)

Leave a Comment