ಜನಪ್ರತಿನಿಧಿಯಾಗುವ ಮೊದಲಿನ ಅಪರಾಧಗಳಿಗೂ ವಿಶೇಷ ನ್ಯಾಯಾಲಯಕ್ಕೆ ವಿಚಾರಣಾಧಿಕಾರವಿದೆ; ಹೈಕೋರ್ಟ್
- by Prashanth Basavapatna
- November 14, 2026
- 16 Views
ಬೆಂಗಳೂರು: ಆರೋಪಿಯು ಜನಪ್ರತಿನಿಧಿಯಾಗುವುದಕ್ಕೂ ಮುನ್ನ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳನ್ನೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಅಪರಾಧ ನಡೆದಾಗ ಆರೋಪಿತರು ಜನಪ್ರತಿನಿಧಿಯಾಗಿದ್ದರೇ ಅಥವಾ ನಂತರ ಆ ಸ್ಥಾನಕ್ಕೆ ಆಯ್ಕೆಯಾದರೇ ಎಂಬುದು ವಿಶೇಷ ನ್ಯಾಯಾಲಯದ ವಿಚಾರಣಾಧಿಕಾರ ನಿರ್ಧರಿಸುವಲ್ಲಿ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಜಿ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅಲಿಯಾಸ್ ಬಾವಾ ಮೊಹಮ್ಮದ್ ಫಾರೂಖ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚಿಕ್ಕನಾಯಕನಹಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮುಂದಿದ್ದ ಪ್ರಕ್ರಿಯೆ ರದ್ದುಪಡಿಸಿದೆ. ಜತೆಗೆ, ಪ್ರಕರಣವನ್ನು ರಾಜ್ಯದಲ್ಲಿ ಮ್ಯಾಜಿಸ್ಪ್ರೇಟ್ ವಿಚಾರಣೆಗೆ ಒಳಪಡುವ ಹಾಲಿ ಹಾಗೂ ಮಾಜಿ ಸಂಸದರು-ಶಾಸಕರ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಿದೆ.
ಡಾ. ಕೆ. ಸುಧಾಕರ್ ಹಾಗೂ ಕರ್ನಾಟಕ ರಾಜ್ಯದ ನಡುವಿನ ಪ್ರಕರಣ ಮತ್ತು ಡಾ. ವೈ. ರಾಮಪ್ಪ ಹಾಗೂ ಕರ್ನಾಟಕ ರಾಜ್ಯದ ನಡುವಿನ ಪ್ರಕರಣಗಳಲ್ಲಿ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಹಾಲಿ ಹಾಗೂ ಮಾಜಿ ಸಂಸದರು-ಶಾಸಕರ ವಿದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದ್ದರಿಂದ, ಆರೋಪಿತ ಅಪರಾಧವು ವ್ಯಕ್ತಿ ಜನಪ್ರತಿನಿಧಿಯಾಗುವುದಕ್ಕೂ ಮೊದಲು ನಡೆದಿದೆಯೇ ಅಥವಾ ನಂತರ ನಡೆದಿದೆಯೇ ಎಂಬುದು ಈ ನ್ಯಾಯಾಲಯಗಳ ವಿಚಾರಣಾಧಿಕಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಜನಪ್ರತಿನಿಧಿಯಾಗುವ ಮೊದಲು, ಅಧಿಕಾರದಲ್ಲಿದ್ದಾಗ ಅಥವಾ ಅಧಿಕಾರದಿಂದ ನಿರ್ಗಮಿಸಿದ ಬಳಿಕ ನಡೆದಿವೆ ಎನ್ನಲಾದ ಅಪರಾಧಗಳ ಪ್ರಕರಣಗಳನ್ನೂ ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸಬಹುದು. ವಿಚಾರಣಾಧಿಕಾರವಿಲ್ಲದ ಸಾಮಾನ್ಯ ನ್ಯಾಯಾಲಯ ಸಂಜ್ಞೇ ಪಡೆದಿರುವುದು ಕಾನೂನಿನ ದೃಷ್ಟಿಯಿಂದ ಉಳಿಯಲಾಗದ ದೋಷವಾಗಿದೆ. ಆದರೆ, ಅದರಿಂದ ಮೂಲ ದೂರು ಅಥವಾ ತನಿಖೆಯೇ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಸಂಬಂಧಿತ ದಾಖಲೆಗಳನ್ನು ಅಧಿಕಾರ ಹೊಂದಿರುವ ನ್ಯಾಯಾಲಯದ ಮುಂದಿಟ್ಟು, ಅಲ್ಲಿಂದ ಕಾನೂನುಬದ್ಧ ಪ್ರಕ್ರಿಯೆ ಮುಂದುವರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸನ್ ಮಿನರಲ್ಸ್ ಸಂಸ್ಥೆಯ ಮಾಲೀಕ ವಿ. ಸೆಲ್ವರಾಜ್ ಎಂಬುವರು ಫಾರೂಕ್ ವಿರುದ್ಧ ದೂರು ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 409 (ನಂಬಿಕೆ ದ್ರೋಹ), 420 (ವಂಚನೆ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ), 471 (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿ ಎಂದು ಬಳಕೆ) ಮತ್ತು 120ಬಿ (ಕ್ರಿಮಿನಲ್ ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಅದಕ್ಕೆ ದೂರುದಾರರು ಆಕ್ಷೇಪಣಾ ಅರ್ಜಿ ಸಲ್ಲಿಸಿದ ಬಳಿಕ, ಚಿಕ್ಕನಾಯಕನಹಳ್ಳಿ ನ್ಯಾಯಾಲಯವು 2023ರ ಮೇ 4ರಂದು ಆರೋಪಿತ ಅಪರಾಧಗಳ ಸಂಜ್ಞೇ ಪಡೆದು, ನಂತರ 2024ರ ಮೇ 29ರಂದು ಆರೋಪಿಯ ಹಾಜರಾತಿಗಾಗಿ ನ್ಯಾಯಾಲಯದ ಪ್ರಕ್ರಿಯೆ ಜಾರಿಗೊಳಿಸುವ ಆದೇಶ ಹೊರಡಿಸಿತ್ತು. ಈ ಆದೇಶಗಳು ಹಾಗೂ ಪ್ರಕರಣದ ಮುಂದಿನ ಪ್ರಕ್ರಿಯೆಯನ್ನು ಪ್ರಶ್ನಿಸಿ ಫಾರೂಕ್ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸಿರುವಾಗ ಸಾಮಾನ್ಯ ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ಸಂಜ್ಞೇ ಪಡೆಯಲು ಅಧಿಕಾರ ಹೊಂದಿಲ್ಲ. ಪ್ರಕರಣವನ್ನು ಸಂಜ್ಞೇ ಪಡೆಯುವುದಕ್ಕಾಗಿ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಕೋರಿದರು.
ರಾಜ್ಯದ ಪರ ವಾದ ಮಂಡಿಸಿದ ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪ್ರಕರಣದ ಸಿಂಧುತ್ವಕ್ಕೆ ಸಂಬಂಧಿಸಿದ ವಾದಗಳನ್ನು ವಿರೋಧಿಸಿದರಾದರೂ, ಇಂತಹ ಪ್ರಕರಣಗಳಲ್ಲಿ ಸಾಮಾನ್ಯ ನ್ಯಾಯಾಲಯದ ಬದಲು ವಿಶೇಷ ನ್ಯಾಯಾಲಯವೇ ಸಂಜ್ಞೇ ಪಡೆಯಬೇಕೆಂದು ಹೈಕೋರ್ಟ್ನ ಹಿಂದಿನ ತೀರ್ಪುಗಳು ಸ್ಪಷ್ಟಪಡಿಸಿವೆ ಎಂಬುದನ್ನು ಒಪ್ಪಿಕೊಂಡರು.
Related Articles
Thank you for your comment. It is awaiting moderation.


Comments (0)