ಮಾನನಷ್ಟ ಮೊಕದ್ದಮೆ; ಪ್ರಕರಣ ರದ್ದು ಕೋರಿದ್ದ ಎಚ್. ವಿಶ್ವನಾಥ್, ಎ. ಮಂಜುನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Legal Samachar Desk
- October 1, 2026
- 8 Views
ಬೆಂಗಳೂರು: ವಿಧಾನಪರಿಷತ್ ಸದಸ್ಯ ಬಿ.ಎಸ್. ಶಿವಣ್ಣ (ಮಳವಳ್ಳಿ ಶಿವಣ್ಣ) ದಾಖಲಿಸಿರುವ ಮಾನನಷ್ಟ ಮೊಕದ್ದಮೆ ರದ್ದು ಕೋರಿ ಮಾಜಿ ಸಚಿವ ಎಚ್. ವಿಶ್ವನಾಥ್ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಎಚ್. ವಿಶ್ವನಾಥ್ ಹಾಗೂ ಎ. ಮಂಜುನಾಥ್ ಅವರ ಅರ್ಜಿಗಳು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು. ಅರ್ಜಿದಾರರ ಪರ ವಕೀಲರು ಗುರುವಾರ ಸಹ ವಿಚಾರಣೆಗೆ ಗೈರು ಹಾಜರಾಗಿದ್ದರು.
ಅರ್ಜಿಯ ಕಳೆದ ವಿಚಾರಣೆಯಂದು (ಸೆಪ್ಟೆಂಬರ್ 25) ನ್ಯಾಯಪೀಠ, ಪ್ರತಿವಾದಿ ಪರ ವಕೀಲರು ಪ್ರಕರಣದಲ್ಲಿ ವಾದ ಮಂಡಿಸಿಲು ಸಿದ್ಧರಿದ್ದು, ಅರ್ಜಿದಾರರ ಪರ ವಕೀಲರಿಗೆ ತಮ್ಮ ವಾದ ಮಂಡಿಸುವಂತೆ ಕೋರಿಕೊಂಡಿದ್ದಾರೆ. ಆದರೆ, ಅರ್ಜಿದಾರರ ಪರ ವಕೀಲರು ಸತತ ಗೈರು ಹಾಜರಾಗಿದ್ದಾರೆ. ಮುಂದಿನ ವಿಚಾರಣೆ ವೇಳೆ ಹಾಜರಾಗದಿದ್ದರೆ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿತ್ತು. ಆದರೆ, ಅರ್ಜಿದಾರರ ಪರ ವಕೀಲರು ಪುನಃ ಗೈರು ಹಾಜರಾಗಿದ್ದರಿಂದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.
ಪ್ರಕರಣವೇನು?
ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕಾರ ಮಾಡುವ ವೇದಿಕೆಯಲ್ಲಿ ಅವರ ಜತೆ ಬಿ.ಎಸ್. ಶಿವಣ್ಣ ಇದ್ದರು. ಇದನ್ನು ಆಕ್ಷೇಪಿಸಿದ್ದ ಎಚ್. ವಿಶ್ವನಾಥ್, ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಸಿಎಂ ಪ್ರಮಾಣವಚನ ಸ್ವೀಕಾರದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಅಲ್ಲದೇ ಈ ವಿಚಾರವಾಗಿ ರಾಜ್ಯಪಾಲರಿಗೆ ಪತ್ರ ಸಹ ಬರೆದಿದ್ದರು. ಇದರ ವಿರುದ್ಧ ಶಿವಣ್ಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ ದೂರನ್ನು ವಿಚಾರಣೆಗೆ ಅಂಗೀಕರಿಸಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ವಿಶ್ವನಾಥ್ ಹಾಗೂ ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)