ಸಿನಿಮಾ ಟಿಕೆಟ್ ದರದ ಮೇಲೆ 2% ಸೆಸ್; ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್

ಬೆಂಗಳೂರು: ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್ (ಉಪಕರ) ಸಂಗ್ರಹಿಸುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯ್ದೆ-2024ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್‌ ಐನಾಕ್ಸ್‌, ಇದರ ಷೇರುದಾರ ಪ್ರತೀಕ್‌ ಚೌಹಾಣ್‌, ವಿನಾಯಕ ಚಿತ್ರಮಂದಿರ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿನಾಯಕ ಚಿತ್ರಮಂದಿರದ ಪರ ವಕೀಲ ಕೆ.ವಿ. ಧನಂಜಯ್‌ ವಾದ ಮಂಡಿಸಿ, ಕಾಯ್ದೆಯಲ್ಲಿ ಉಪಕರ ವಿಧಿಸಲು ಅವಕಾಶವಿಲ್ಲ. ಈ ಹಣವನ್ನು ನಾಟಕ, ನೃತ್ಯ, ಯಕ್ಷಗಾನ ಕಲಾವಿದರ ಏಳಿಗೆಗೆ ಬಳಸಬೇಕು ಎಂದು ಸರ್ಕಾರ ಹೇಳುತ್ತದೆ. ಕಾಯ್ದೆ ಅಡಿ ವಿಧಿಸುವ ಶುಲ್ಕವು ತೆರಿಗೆ ಆಗುತ್ತದೆಯೇ ಹೊರತು ಉಪಕರವಾಗಲ್ಲ. ಎರಡು ವರ್ಷ ಕಾಯ್ದೆಯನ್ನು ಶೈತ್ಯಾಗಾರದಲ್ಲಿಟ್ಟಿದ್ದ ಸರ್ಕಾರ ಈಗ ಏಕಾಏಕಿ ಜಾರಿಗೊಳಿಸಿ, ಸೆಸ್‌ ಪಾವತಿಸುವಂತೆ ಸೂಚಿಸಿದೆ. ಕಾಯ್ದೆಯಲ್ಲಿ ಮೌಲ್ಯಮಾಪನ ವ್ಯವಸ್ಥೆಯೇ ಇಲ್ಲ ಎಂದರು.

ಎಂಎಐ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು, ನಾವು ಇಡೀ ಕಾಯ್ದೆಯನ್ನು ಪ್ರಶ್ನಿಸಿದ್ದೇವೆ. ಸೆಸ್‌ ಅನ್ನು ನಾಟಕ, ನೃತ್ಯ ಮತ್ತಿತರ ಅಕಾಡೆಮಿಗಳ ಜತೆ ಗುರುತಿಸಿಕೊಂಡಿರುವ ಕಲ್ಯಾಣ ಬಳಸಲಾಗುವುದು ಎಂದು ಸರ್ಕಾರಕ್ಕೆ ಹೇಳುತ್ತಿದೆ. ಆ ರೀತಿ ಮಾಡಲಾಗದು ಎಂದರು.

ಈ ಹಂತದಲ್ಲಿ ನ್ಯಾಯಪೀಠ, ಸರ್ಕಾರವನ್ನು ಕುರಿತು, ಕಾಯ್ದೆಯೇ ಇನ್ನೂ ಜಾರಿಗೊಂಡಿಲ್ಲ. ಹೀಗಿರುವಾಗ ನೋಟಿಸ್‌ ಜಾರಿಗೊಳಿಸುವ ಅಧಿಕಾರ ಸರ್ಕಾರಕ್ಕೆ ಎಲ್ಲಿದೆ? ಎಂದು ಪ್ರಶ್ನಿಸಿತಲ್ಲದೆ, ಅರ್ಜಿಗಳಲ್ಲಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಆದ್ದರಿಂದ, ಈ ವಿಚಾರವನ್ನು ಅಡ್ವೋಕೇಟ್ ಜನರಲ್ ಅವರ ಗಮನಕ್ಕೆ ತರುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ (ಸೆಪ್ಟೆಂಬರ್ 30) ಮುಂದೂಡಿತು.

Related Articles

Comments (0)

Leave a Comment