ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಮುನ್ನೆಚ್ಚರಿಕೆ ಬಂಧನಕ್ಕೀಡಾದವರ ಹಕ್ಕು ಉಲ್ಲಂಘನೆ ಸಲ್ಲದು – ಹೈಕೋರ್ಟ್

ಬೆಂಗಳೂರು: ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಅಕ್ರಮ ಸಾಗಣೆ ತಡೆ (ಪಿಐಟಿ-ಎನ್‌ಡಿಪಿಎಸ್) ಕಾಯ್ದೆಯಡಿ ಹೊರಡಿಸಲಾಗುವ ಮುನ್ನೆಚ್ಚರಿಕೆ ಬಂಧನ ಆದೇಶ ರದ್ದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದಾದ ಹಕ್ಕಿನ ಬಗ್ಗೆ ಬಂಧಿತ ವ್ಯಕ್ತಿಗೆ ಮಾಹಿತಿ ನೀಡದಿರುವುದು ಸಂವಿಧಾನದ ಪರಿಚ್ಛೇದ 22(5)ರ ರಕ್ಷಣೆಯ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

ಬಾಗಲಕೋಟೆಯ ರಾಜು ಕಾಳೆ ಎಂಬುವರ ವಿರುದ್ಧ ಬೆಳಗಾವಿ ಉತ್ತರ ವಲಯದ ಐಜಿಪಿ 2026ರ ಜುಲೈ 3ರಂದು ಹೊರಡಿಸಿದ್ದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್ ಮುನ್ನೆಚ್ಚರಿಕಾ ಬಂಧನವನ್ನು ಜಾಮೀನು ರದ್ದುಪಡಿಸಲು ಪರ್ಯಾಯ ವ್ಯವಸ್ಥೆಯಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಿದೆ.

ರಾಜು ಕಾಳೆ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಲು ನಿರ್ದೇಶನ ಕೋರಿ ಅವರ ಪತ್ನಿ ಮಾಲಾ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.

ಹೈಕೋರ್ಟ್ ಹೇಳಿದ್ದೇನು?
ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯ ಅನುಸಾರ ಬಂಧನ ಆದೇಶ ರದ್ದುಪಡಿಸುವ ಅಧಿಕಾರವನ್ನು ಕಾನೂನು ಕೇಂದ್ರ ಸರ್ಕಾರಕ್ಕೆ ನೀಡಿರುವಾಗ, ಆ ಅಧಿಕಾರವನ್ನು ಬಳಸುವಂತೆ ಕೋರಿ ಮನವಿ ಸಲ್ಲಿಸಲು ಬಂಧಿತ ವ್ಯಕ್ತಿಗೆ ಅವಕಾಶ ನೀಡಬೇಕು. ವ್ಯಕ್ತಿಯ ಸ್ವಾತಂತ್ರ್ಯ ಕಸಿದುಕೊಂಡ ಬಳಿಕ ಅಂತಹ ಹಕ್ಕಿನ ಕುರಿತು ತಿಳಿಸದಿದ್ದರೆ, ಅದು ಕಾಗದದಲ್ಲಿ ಮಾತ್ರ ಇರುವ ಹಕ್ಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಯಾರಿಗೆ ಮತ್ತು ಯಾವ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂಬುದನ್ನು ಬಂಧಿತ ವ್ಯಕ್ತಿಗೆ ಸ್ಪಷ್ಟವಾಗಿ ತಿಳಿಸಿದಾಗ ಮಾತ್ರ ಆ ಹಕ್ಕು ನೈಜ ಹಾಗೂ ಅರ್ಥಪೂರ್ಣವಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಹಕ್ಕಿನ ಕುರಿತು ತಿಳಿಸದಿರುವುದು ಕೇವಲ ನಿರ್ಲಕ್ಷಿಸಬಹುದಾದ ಲೋಪವಲ್ಲ. ಅದು ಸಂವಿಧಾನದ ಪರಿಚ್ಛೇದ 22(5)ರಡಿ ಕಲ್ಪಿಸಿರುವ ರಕ್ಷಣೆಯ ಮೂಲ ಉದ್ದೇಶಕ್ಕೇ ಧಕ್ಕೆ ತರುತ್ತದೆ. ಮುನ್ನೆಚ್ಚರಿಕಾ ಬಂಧನವು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರಾಜು ಅವರಿಗೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್‌ 37ರ ಕಠಿಣ ಷರತ್ತುಗಳನ್ನು ಪರಿಶೀಲಿಸಿದ ನಂತರವೇ ಜಾಮೀನು ನೀಡಲಾಗಿತ್ತು. ಜಾಮೀನು ಆದೇಶ ಇನ್ನೂ ಜಾರಿಯಲ್ಲಿದ್ದು, ಅದನ್ನು ರದ್ದುಪಡಿಸಲು ಪ್ರಾಸಿಕ್ಯೂಷನ್‌ ಅರ್ಜಿ ಸಲ್ಲಿಸಿರಲಿಲ್ಲ. ಅವರು ಜಾಮೀನಿನ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡಿದ್ದಾರೆಂದು ಯಾವುದೇ ಸಕ್ಷಮ ನ್ಯಾಯಾಲಯ ದಾಖಲಿಸಿರಲಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಒಂದೊಮ್ಮೆ ರಾಜು ಕಾಳೆ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ಪ್ರಾಸಿಕ್ಯೂಷನ್‌ ಭಾವಿಸಿದ್ದರೆ, ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು, ಇದೇ ರೀತಿಯ ಚಟುವಟಿಕೆ ಮರುಕಳಿಸಬಹುದೆಂಬ ಆತಂಕದ ಆಧಾರದಲ್ಲಿ ಮುನ್ನೆಚ್ಚರಿಕೆ ಬಂಧನದ ಮೊರೆ ಹೋಗುವುದು ಸರಿಯಲ್ಲ ಎಂದಿರುವ ನ್ಯಾಯಪೀಠ, ಬಂಧನ ಆದೇಶವು ಹಲವು ಕಾನೂನು ಲೋಪಗಳಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟು ಅದನ್ನು ರದ್ದುಪಡಿಸಿದೆ. ಜತೆಗೆ, ಬೇರೆ ಯಾವುದೇ ಪ್ರಕರಣದಲ್ಲಿ ಬಂಧನ ಅಗತ್ಯವಿಲ್ಲದಿದ್ದರೆ ರಾಜು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪ್ರಕರಣವೇನು?
ಪಿಐಟಿ-ಎನ್‌ಡಿಪಿಎಸ್ ಕಾಯ್ದೆ 1988ರ ಅಡಿ ಜುಲೈ 3ರಂದು ರಾಜು ವಿರುದ್ಧ ಬಂಧನ ಆದೇಶ ಹೊರಡಿಸಲಾಗಿತ್ತು. ಅವರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ರಾಜು ವಿರುದ್ಧ ದಾಖಲಾಗಿದ್ದ 3 ಕ್ರಿಮಿನಲ್‌ ಪ್ರಕರಣಗಳನ್ನು ಬಂಧನ ಪ್ರಾಧಿಕಾರ ಪರಿಗಣಿಸಿತ್ತು. ಅವರು ಪದೇಪದೆ ಅಪರಾಧ ಎಸಗುತ್ತಿದ್ದು, ಅವರ ಕೃತ್ಯವು ಸಾರ್ವಜನಿಕರ, ವಿಶೇಷವಾಗಿ ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿತ್ತು. ಮೊದಲ ಪ್ರಕರಣದಲ್ಲಿ ರಾಜುಗೆ 5 ಸಾವಿರ ರೂ. ದಂಡ ವಿಧಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದು, ವಿಚಾರಣೆ ಬಾಕಿ ಇತ್ತು. 2026ರಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿ ಅವರ ಪತ್ನಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ರಾಜು ಅವರೇ ಗಾಂಜಾ ಪೂರೈಸಿ ಮಾರಾಟ ಮಾಡಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

Related Articles

Comments (0)

Leave a Comment