ಡಾ.‌ ಮಹೇಶ್ ಜೋಶಿ ಹೂಡಿರುವ ನ್ಯಾಯಾಂಗ ನಿಂದನೆ ಪ್ರಕರಣ; ಕಸಾಪ ಆಡಳಿತಾಧಿಕಾರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಾಜಿ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೂಡಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪರಿಷತ್‌ನ ಆಡಳಿತಾಧಿಕಾರಿ ಕೆ.ಎ. ದಯಾನಂದ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕಸಾಪ‌ದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಜಾರಿಗೊಳಿಸಿದ್ದ ಶೋಕಾಸ್ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಕಸಾಪ ಮಾಜಿ ಅಧ್ಯಕ್ಷರ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಅಥವಾ ನಿರ್ಧಾರವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು 2026ರ ಫೆಬ್ರವರಿ 25ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಆಡಳಿತಾಧಿಕಾರಿ ದಯಾನಂದ್ ವಿರುದ್ಧ ಮಹೇಶ್ ಜೋಶಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಿದ್ದಾರೆ.

ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಎನ್.ವಿ. ಭವಾನಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಆಡಳಿತಾಧಿಕಾರಿ ಕೆ.ಎ. ದಯಾನಂದ್ ಅವರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ನ್ಯಾಯಾಲಯದ ತಡೆ ಆದೇಶವಿದ್ದರೂ, ಅದನ್ನು ಪಾಲಿಸದಿರುವ ಕುರಿತು ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.

ಅರ್ಜಿಯಲ್ಲೇ‌ನಿದೆ?
ಕಸಾಪದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಪ್ರಕರಣದಲ್ಲಿ ಜೋಶಿ ವಿರುದ್ಧದ ಆರೋಪ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಡಳಿತಾಧಿಕಾರಿ 2026ರ ಫೆಬ್ರವರಿ 10ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಜೋಶಿಯವರ ವಿರುದ್ಧ ತೆಗೆದುಕೊಳ್ಳುವ ಯಾವುದೇ ನಿಲುವು ಅಥವಾ ನಿರ್ಧಾರವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು 2026ರ ಫೆಬ್ರವರಿ 25ರಂದು ಏಕಸದಸ್ಯ ನ್ಯಾಯಪೀಠ ತಡೆ ಆದೇಶ ನೀಡಿ, ಅದನ್ನು ಕಾಲ-ಕಾಲಕ್ಕೆ ವಿಸ್ತರಿಸಿಕೊಂಡು ಬಂದಿದೆ. ಈಗಲೂ ಆ ತಡೆ ಆದೇಶ ಚಾಲ್ತಿಯಲ್ಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಮಧ್ಯೆ, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಆಡಳಿತಾಧಿಕಾರಿ ಜೋಶಿಯವರ ಕಸಾಪ ಅಜೀವ ಸದಸ್ಯತ್ವವನ್ನು ರದ್ದುಪಡಿಸಿ 2026ರ ಜೂನ್ 8ರಂದು ಆದೇಶ ಹೊರಡಿಸಿದ್ದರು. ತಪ್ಪಿನ ಅರಿವಾದ ಬಳಿಕ ಅಜೀವ ಸದಸ್ಯತ್ವ ರದ್ದುಪಡಿಸಿದ ಆದೇಶ ಮಾರ್ಪಡಿಸಿ, ಅಜೀವ ಸದಸ್ಯತ್ವವನ್ನು ಅಮಾನತ್ತಿನಲ್ಲಿರಿಸಿ ಜೂನ್ 10ರಂದು ಆದೇಶ ಹೊರಡಿಸಿದ್ದಾರೆ. ಇದು ಏಕಸದಸ್ಯ ನ್ಯಾಯಪೀಠದ ಆದೇಶದ ಸ್ಪಷ್ಟ ಹಾಗೂ ಉದ್ದೇಶಪೂರ್ವಕ ಉಲ್ಲಂಘನೆ ಆಗಿದ್ದು, ಆಡಳಿತಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment