ಮಗಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಮಹಿಳೆಗೆ ₹1 ಕೋಟಿ ವಂಚನೆ; ದಂಪತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 1.4 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ಇದು ಕೇವಲ ಹಣ ವಸೂಲಾತಿಗೆ ಸಂಬಂಧಿಸಿದ ವಿವಾದವಲ್ಲ. ಮೇಲ್ನೋಟಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಯ ಅಪರಾಧದ ಅಂಶಗಳು ಪ್ರಕರಣದಲ್ಲಿವೆ ಎಂದು ಅಭಿಪ್ರಾಯಪಟ್ಟಿದೆ.

ಆರೋಪಿಗಳಾದ ಶಿಲ್ಪಾ ಮತ್ತವರ ಪತಿ ಪಿ. ಕಿರಣ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವು ಸಂಪೂರ್ಣವಾಗಿ ಸಿವಿಲ್‌ ಸ್ವರೂಪದ್ದಾಗಿದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್‌ ತಳ್ಳಿಹಾಕಿದೆ.

ಹಣದ ವಹಿವಾಟು ಒಳಗೊಂಡ ಪ್ರತಿಯೊಂದು ವ್ಯವಹಾರವೂ ಕೇವಲ ಆ ಕಾರಣದಿಂದ ತನ್ನ ಕ್ರಿಮಿನಲ್‌ ಸ್ವರೂಪ ಕಳೆದುಕೊಳ್ಳುವುದಿಲ್ಲ. ವ್ಯವಹಾರದ ಮೂಲವೇ ವಂಚನೆಯಿಂದ ಕೂಡಿತ್ತು ಎಂಬ ಆರೋಪವಿರುವಾಗ, ಅದನ್ನು ಸಿವಿಲ್‌ ವ್ಯವಹಾರವೆಂಬ ನೆಪದಲ್ಲಿ ಕಾನೂನುಬದ್ಧ ಕ್ರಿಮಿನಲ್‌ ತನಿಖೆಯನ್ನು ಹತ್ತಿಕ್ಕಲು ಅವಕಾಶ ನೀಡಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಹಾಲಿ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿಯೇ ಅಪರಾಧವನ್ನು ರದ್ದುಪಡಿಸುವುದು, ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧಗಳನ್ನು ಬಹಿರಂಗಪಡಿಸುವ ಆರೋಪಗಳ ತನಿಖೆಯನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಪ್ರಕರಣದ ತನಿಖೆ ಮುಂದುವರಿಸಲು ಪೊಲೀಸರಿಗೆ ಅನುಮತಿ ನೀಡಿದೆ.

ಹಣದ ವ್ಯವಹಾರವೆಲ್ಲವೂ ಸಿವಿಲ್ ವ್ಯಾಜ್ಯವಾಗದು:
ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಆರೋಪಿಗಳ ಪರ ವಕೀಲರು, ಇದು ಇಬ್ಬರ ನಡುವೆ ಮೂರು ವರ್ಷಗಳ ಹಿಂದೆ ನಡೆದಿದ್ದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸಿವಿಲ್‌ ವಿವಾದವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಹಣ ವಸೂಲಿ ಮಾಡಲು ಒತ್ತಡ ಹೇರುವ ಉದ್ದೇಶದಿಂದಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂಬ ವಾದಕ್ಕೆ ‘ಸಿವಿಲ್‌ ವಿವಾದ’ ಎಂಬ ಪದ ಬಳಕೆ ಮಾತ್ರ ರಕ್ಷಾ ಕವಚವಾಗುವುದಿಲ್ಲ ಎಂದು ಹೇಳಿದೆ. ವ್ಯವಹಾರದಲ್ಲಿ ಹಣದ ವಿಚಾರ ಒಳಗೊಂಡಿದೆ ಎಂಬ ಕಾರಣಕ್ಕಾಗಿಯೇ ಅದು ತನ್ನ ಕ್ರಿಮಿನಲ್‌ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಆರೋಪಿ ದಂಪತಿ 2023ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ಮಿತಾ ಪ್ರಸಾದ್‌ ಎಂಬುವರು ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಭಾವಿಗಳ ಸಂಪರ್ಕಗಳಿದ್ದು, 2023ರಲ್ಲಿ ನೀಟ್‌ ಪರೀಕ್ಷೆ ಬರೆದಿದ್ದ ನನ್ನ ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ದಂಪತಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದರು. ಆರೋಪಿಗಳ ಬೇಡಿಕೆಯಂತೆ ಆರಂಭದಲ್ಲಿ 35 ಲಕ್ಷ ರೂ. ನಗದು ನೀಡಿದ್ದು, ನಂತರ ಐದು ಬ್ಯಾಂಕ್‌ ವಹಿವಾಟುಗಳ ಮೂಲಕ ಒಟ್ಟು 1.05 ಕೋಟಿ ವರ್ಗಾಯಿಸಿದ್ದು, ಆರೋಪಿಗಳಿಗೆ ನೀಡಿದ ಒಟ್ಟು ಮೊತ್ತ 1.4 ಕೋಟಿ ರೂಪಾಯಿಗಳಾಗಿದೆ. ಪದೇಪದೆ ಭರವಸೆ ನೀಡಿದ ಹೊರತಾಗಿಯೂ ವೈದ್ಯಕೀಯ ಸೀಟು ಸಿಗಲಿಲ್ಲ. 2026ರಲ್ಲಿ ದೂರು ದಾಖಲಿಸುವವರೆಗೂ ಹಣವನ್ನೂ ಹಿಂದಿರುಗಿಸಿಲ್ಲ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

Related Articles

Comments (0)

Leave a Comment